ದೇವಸ್ಥಾನಗಳ ಆದಾಯದ ಮೇಲೆ ಸರ್ಕಾರದ ವಕ್ರ ದೃಷ್ಟಿ: ವಿಜಯೇಂದ್ರಗೆ ಕಾನೂನಿನ ಅರಿವಿಲ್ಲ ಎಂದ ರಾಮಲಿಂಗಾರೆಡ್ಡಿ

2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ(ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರ.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: 2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ(ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದ್ದು, ಸರ್ಕಾರದ ಕ್ರಮವನ್ನು ಸಚಿವ ರಾಮಲಿಂಗಾ ರೆಡ್ಡಿ ಅವರು ಗುರುವಾರ ಸಮರ್ಥಿಸಿಕೊಂಡಿದ್ದಾರೆ.

ದೇವಸ್ಥಾನದ ಹಣದಿಂದ ತನ್ನ 'ಖಾಲಿ ಬೊಕ್ಕಸ' ತುಂಬಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕೇಸರಿ ಪಕ್ಷ ಆರೋಪಿಸಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಿದ ಮಸೂದೆಯನ್ನು ಸಮರ್ಥಿಸಿಕೊಂಡ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಕಾಯಿದೆಯಲ್ಲಿ ಯಾವುದೇ ಹೊಸ ನಿಬಂಧನೆ ಇಲ್ಲ. 2003ರ ಕಾಯ್ದೆಯಲ್ಲಿ ಏನು ಇದೆಯೋ ಹಾಗೆ ಇದೆ ಎಂದು ಸ್ಪಷ್ಟಪಡಿಸಿದರು.

ಕೆಲವು ಧಾರ್ಮಿಕ ಪರಿಷತ್​ಗೆ ತಿದ್ದುಪಡಿ ತಂದಿದ್ದೇವೆ. ವಿಶ್ವ ಕರ್ಮ ಸಮುದಾಯಕ್ಕೆ ಎ, ಬಿ, ಸಿ ಗ್ರೇಡ್ ದೇವಸ್ಥಾನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮೊದಲನೆಯದಾಗಿ ಇದು ಪ್ರಮುಖ ತಿದ್ದುಪಡಿಯಾಗಿದೆ. ಇದನ್ನ ಬಿಟ್ರೆ ಯಾವುದೇ ಬದಲಾವಣೆ ಮಾಡಿಲ್ಲ. ಕರ್ನಾಟಕದಲ್ಲಿ 3,000 ಸಿ-ಗ್ರೇಡ್ ದೇವಾಲಯಗಳಿವೆ. ಅವು ಐದು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿವೆ, ಅಲ್ಲಿ 'ಧಾರ್ಮಿಕ ಪರಿಷತ್'ಗೆ ಹಣವಿಲ್ಲ ಎಂದರು.

ಧಾರ್ಮಿಕ ಪರಿಷತ್ತು ಯಾತ್ರಿಕರ ಅನುಕೂಲಕ್ಕಾಗಿ ದೇವಾಲಯದ ನಿರ್ವಹಣೆಯನ್ನು ಸುಧಾರಿಸುವ ಸಮಿತಿಯಾಗಿದೆ.

ಐದು ಲಕ್ಷದಿಂದ 25 ಲಕ್ಷದವರೆಗಿನ ಆದಾಯವಿರುವ ಬಿ-ಗ್ರೇಡ್ ದೇವಸ್ಥಾನಗಳಿದ್ದು, 2003 ರಿಂದ ಒಟ್ಟು ಆದಾಯದ ಶೇಕಡಾ ಐದರಷ್ಟು ಮೊತ್ತವು ಧಾರ್ಮಿಕ ಪರಿಷತ್ತಿಗೆ ಹೋಗುತ್ತಿದೆ. 2003 ರಿಂದ 25 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಾಲಯಗಳಿಂದ ಧಾರ್ಮಿಕ ಪರಿಷತ್ತು ಶೇ. 10 ರಷ್ಟು ಆದಾಯವನ್ನು ಪಡೆಯುತ್ತಿವೆ ಎಂದು ಸಚಿವರು ವಿವರಿಸಿದರು.

ಈಗ ನಾವು ಮಾಡಿರುವುದು ಏನೆಂದರೆ, 10 ಲಕ್ಷದವರೆಗೆ ಆದಾಯವಿದ್ದಲ್ಲಿ ಅದನ್ನು ಧಾರ್ಮಿಕ ಪರಿಷತ್ತಿಗೆ ಪಾವತಿಸದಂತೆ ನಾವು ಮಾಡಿದ್ದೇವೆ. ಒಟ್ಟು ಆದಾಯ 10 ಲಕ್ಷ ಮತ್ತು ಒಂದಕ್ಕಿಂತ ಕಡಿಮೆ ಇರುವ ದೇವಾಲಯಗಳಿಂದ ನಾವು ಶೇಕಡಾ ಐದರಷ್ಟು ಆದಾಯ ಸಂಗ್ರಹಿಸಲು ನಿಬಂಧನೆಗಳನ್ನು ಮಾಡಿದ್ದೇವೆ. ಒಂದು ಕೋಟಿಗಿಂತ ಹೆಚ್ಚಿನ ಆದಾಯವಿರುವ ದೇವಸ್ಥಾನಗಳಿಂದ ಶೇಕಡ 10ರಷ್ಟು ಆದಾಯ ಸಂಗ್ರಹಿಸಲಾಗುವುದು. ಈ ಎಲ್ಲಾ ಮೊತ್ತವು ಧಾರ್ಮಿಕ ಪರಿಷತ್ತಿಗೆ ತಲುಪುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ರಾಮಲಿಂಗಾ ರೆಡ್ಡಿ
ಕರ್ನಾಟಕ ಬಜೆಟ್ 2024: ತಸ್ತಿಕ್ ಮೊತ್ತ ಅರ್ಚಕರ ಬ್ಯಾಂಕ್ ಖಾತೆಗೆ; ಧಾರ್ಮಿಕ ದತ್ತಿ ಇಲಾಖೆಗೆ ಹಲವು ಯೋಜನೆಗಳ ಘೋಷಣೆ

ರಾಜ್ಯದಲ್ಲಿ 40,000 ರಿಂದ 50,000 ಅರ್ಚಕರಿದ್ದು, ಅವರಿಗೆ ರಾಜ್ಯ ಸರ್ಕಾರ ಸಹಾಯ ಮಾಡಲು ಬಯಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಣವು ಧಾರ್ಮಿಕ ಪರಿಷತ್ತಿಗೆ ತಲುಪಿದರೆ ನಾವು ಅವರಿಗೆ ವಿಮಾ ರಕ್ಷಣೆಯನ್ನು ನೀಡಬಹುದು. ಅವರಿಗೆ ಏನಾದರೂ ಆದರೆ ಅವರ ಕುಟುಂಬಗಳಿಗೆ ಕನಿಷ್ಠ ಐದು ಲಕ್ಷ ರೂ. ನೀಡಲು ನಾವು ಬಯಸುತ್ತೇವೆ. ಅದಕ್ಕೆ ಪ್ರೀಮಿಯಂ ಪಾವತಿಸಲು ನಮಗೆ ಏಳು ಕೋಟಿಯಿಂದ ಎಂಟು ಕೋಟಿ ರೂ. ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.

ದೇವಸ್ಥಾನದ ಅರ್ಚಕರ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಲು ಸರ್ಕಾರ ಬಯಸುತ್ತಿದ್ದು, ಇದಕ್ಕೆ ವಾರ್ಷಿಕ ಐದರಿಂದ ಆರು ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.

ಹಿಂದೂ ದೇವಸ್ಥಾನದ ಹಣ ಅನ್ಯ ಧರ್ಮೀಯರಿಗೆ ಕೊಡಲಾಗ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂ ದೇವಸ್ಥಾನಗಳ ಹಣ ಬೇರೆ ಯಾವುದಕ್ಕೂ ಬಳಕೆಯಾಗುವುದಿಲ್ಲ. ಈ ಹಣ ಮುಜರಾಯಿ ಇಲಾಖೆಗೂ ಬರುವುದಿಲ್ಲ. ಧಾರ್ಮಿಕ ಪರಿಷತ್​ನ ಅಕೌಂಟ್​ನಲ್ಲೇ ಇರುತ್ತೆ. ವಿಧಾನಸಭೆಯಲ್ಲಿ ಈ ತಿದ್ದುಪಡಿಯನ್ನ ಎಲ್ಲರೂ ಸೇರಿ ಪಾಸ್ ಮಾಡಲಾಗಿದೆ. ಬರೋ 30 ಕೋಟಿ ಹಣದಲ್ಲಿ ಸಿ ವರ್ಗದ ದೇವಸ್ಥಾನಕ್ಕೆ ಕೊಡುತ್ತೇವೆ. ಪರ್ಸೆಂಟೇಜ್ ವ್ಯವಹಾರವೆಲ್ಲ ಬಿಜೆಪಿಯವರದ್ದು. ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ. ಕಾನೂನಿನ ಅರಿವಿಲ್ಲ, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ಇಮ್ಮೆಚ್ಯುರುಡ್ ಅಂತಾ ಹೇಳಬೇಕಾಗುತ್ತೆ. ಅವರು ಒಂದು ಸಾರಿ ಧಾರ್ಮಿಕ ಪರಿಷತ್​ನ ಪುಸ್ತಕವನ್ನ ಓದಲಿ. ಓದಿದ ನಂತರ ಮಾತಾಡಿದ್ರೆ ಅವರಿಗೆ ಒಂದು ಗೌರವ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಾಡಿರೋದನ್ನ ವಿಜಯೇಂದ್ರ ಅವರಿಗೆ ಕಳಿಸುತ್ತೇನೆ ಎಂದರು.

ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ರಾಜ್ಯದಲ್ಲಿ ಸರಣೀ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ.

ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂಪಾಯಿ‌ ಆದಾಯ ಮೀರಿದ ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣವನ್ನು ಸರ್ಕಾರ ಬಾಚಿಕೊಳ್ಳಲಿದೆ, ಇದು ದರಿದ್ರತನವಲ್ಲದೇ ಬೇರೇನೂ ಅಲ್ಲ. ದೇವರ ಅರಿಕೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ಸಮರ್ಪಿಸುವ ಕಾಣಿಕೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ವಿನಿಯೋಗವಾಗಬೇಕೇ ಹೊರತೂ, ಅದು ಬೇರೊಂದು ಕಾರ್ಯಕ್ಕೆ ವಿನಿಯೋಗವಾದರೆ ಜನರ ದೈವ ನಂಬಿಕೆಗಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಂಚನೆಯಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com