ರಾಹುಲ್ ಗಾಂಧಿಯಂತೆಯೇ ಕಾಂಗ್ರೆಸ್ ಪಕ್ಷ ಕೂಡ ಗೊಂದಲದಲ್ಲಿದೆ: ರಾಮಮಂದಿರ ಉದ್ಘಾಟನೆ ಬಗ್ಗೆ ಪ್ರಹ್ಲಾದ್ ಜೋಶಿ ಮಾತು!

ಅವರು ಬರುತ್ತಾರೋ ಇಲ್ಲವೋ ಎಂದು ಹೇಳಲು ನಾನು ಜ್ಯೋತಿಷಿಯಲ್ಲ. ಆದರೆ ಇದೇ ಜನರು ರಾಮನ ಅಸ್ತಿತ್ವವನ್ನು ಮತ್ತು ದೇವಾಲಯದ ಅಸ್ತಿತ್ವವನ್ನು ಸ್ವಲ್ಪ ಸಮಯದ ಹಿಂದೆ ವಿರೋಧಿಸಿದರು. ಈ ನಾಯಕರು ರಾಮಮಂದಿರ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡರೆ, ಅಲ್ಪಸಂಖ್ಯಾತ ಮತದಾರರು ಏನು ಯೋಚಿಸುತ್ತಾರೆ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಬೆಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲು ನರೇಂದ್ರ ಮೋದಿ ಸರ್ಕಾರವು ಸಜ್ಜಾಗುತ್ತಿದೆ, ಇದೇ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ  ದೇವಾಲಯದ ಉದ್ಘಾಟನೆಯಲ್ಲಿ ಕಾಂಗ್ರೆಸ್ ಪಾಲ್ಗೋಳ್ಳುವುದರ ಕುರಿತು ಮಾತನಾಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದರ ಅಮಾನತು ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆಯೂ ಅವರು ಮಾತನಾಡಿದರು. ಲೋಕಸಭೆಯಲ್ಲಿ ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರು ಜೋಶಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಮತ್ತು ಚುನಾವಣಾ ಪ್ರಚಾರದ ಭರವಸೆಗಳ ಭಾಗವಾಗಿರುವ ಭರವಸೆಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ  ಉದ್ಘಾಟನೆಗೆ  ಕಾಂಗ್ರೆಸ್ ನಾಯಕರು ಬರುತ್ತಾರಾ?
ಕಾಂಗ್ರೆಸ್ ತನ್ನ ನಾಯಕ ರಾಹುಲ್ ಗಾಂಧಿಯಂತೆಯೇ ಗೊಂದಲದಲ್ಲಿದೆ. ಅವರು ಬರುತ್ತಾರೋ ಇಲ್ಲವೋ ಎಂದು ಹೇಳಲು ನಾನು ಜ್ಯೋತಿಷಿಯಲ್ಲ. ಆದರೆ ಇದೇ ಜನರು ರಾಮನ ಅಸ್ತಿತ್ವವನ್ನು ಮತ್ತು ದೇವಾಲಯದ ಅಸ್ತಿತ್ವವನ್ನು ಸ್ವಲ್ಪ ಸಮಯದ ಹಿಂದೆ ವಿರೋಧಿಸಿದರು. ಈ ನಾಯಕರು ರಾಮಮಂದಿರ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡರೆ, ಅಲ್ಪಸಂಖ್ಯಾತ ಮತದಾರರು ಏನು ಯೋಚಿಸುತ್ತಾರೆ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ. ಅಲ್ಪಸಂಖ್ಯಾತ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ, ಒಂದು ವೇಳೆ ಅವರು ಹಾಜರಾಗದಿದ್ದರೆ, ಮೆಜಾರಿಟಿ ಜನತೆ ಏನು ಹೇಳುತ್ತಾರೆಂದು ಸಂದಿಗ್ಧತೆ. ಇದರಿಂದಾಗಿಯೇ ಅವರು ಗೊಂದಲದಲ್ಲಿದ್ದಾರೆ.

1992ರಲ್ಲಿ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ 30 ವರ್ಷಗಳ ನಂತರ ಕರ್ನಾಟದ ಇಬ್ಬರನ್ನು ಬಂಧಿಸಲಾಗಿದೆ ಇದರ ಬಗ್ಗೆ ಏನು ಹೇಳುತ್ತೀರಿ?
ಇದು ಅವರ ಓಲೈಕೆ ರಾಜಕಾರಣವಲ್ಲದೆ ಬೇರೇನೂ ಅಲ್ಲ. ಈ ಎಲ್ಲಾ ವಿಷಯಗಳ ಮೇಲೆಯೇ ನಾನು  ಹೇಳಿದ್ದು  ಅವರು ಗೊಂದಲಕ್ಕೊಳಗಾಗಿದ್ದಾರೆ ಎಂದು. 30 ವರ್ಷಗಳ ನಂತರ ಈಗ ಅವರನ್ನು ಬಂಧಿಸುವ ಅಗತ್ಯ ಏನಿತ್ತು? ಕಳೆದ 30 ವರ್ಷಗಳಲ್ಲಿ ಅವರು ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದರು.  ಆಗಲ ಬಂಧಿಸಲಿಲ್ಲ ಈಗ ಯಾಕೆ? ಎಂದು ಪ್ರಶ್ನಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರೀಕ್ಷೆಗಳೇನು?
ಕರ್ನಾಟಕದಲ್ಲಿ ನಾವು ಹಿಂದಿನ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಅದೇ ಸಂಖ್ಯೆಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ, ಹಿಂದಿನ ಬಾರಿಗೆ ಹೋಲಿಸಿದರೆ ನಮ್ಮ ಸಂಖ್ಯೆ ಹೆಚ್ಚಾಗುತ್ತದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಮ್ಮ ಮತಗಳಿಕೆ ಹೆಚ್ಚಾಗಲಿದ್ದು, ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವುದು ಖಚಿತ. ಸ್ವತಂತ್ರವಾಗಿ ಬಿಜೆಪಿ ಏಕಾಂಗಿಯಾಗಿ 350ರ ಗಡಿ ದಾಟಲಿದ್ದು, ಹಿಂದಿನ ಬಾರಿಗಿಂತ ಹೆಚ್ಚು ಸಂಖ್ಯೆ ಏರಿಕೆಯಾಗಲಿದೆ.

ಇತ್ತೀಚಿನ ಸಂಸತ್ ಅಧಿವೇಶನದ ವೇಳೆ ಸಂಸದರ ಅಮಾನತು ಕುರಿತು ಏನು ಹೇಳುತ್ತೀರಿ?
ಈ ಸಂಸದರನ್ನು ಅಧಿವೇಶನಕ್ಕೆ ಮಾತ್ರ ಅಮಾನತು ಮಾಡಲಾಗಿತ್ತು. ಅಧಿವೇಶನ ಮುಗಿದ ಮೇಲೆ ಅವರ ಅಮಾನತು ಕೂಡ ಹೋಯಿತು. ಉದ್ದೇಶಪೂರ್ವಕವಾಗಿ ಅವರು ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಬಯಸಿದ್ದರು. ಸದ್ಯ ಬಿಜೆಪಿ ಪರ ಗಾಳಿ ಬೀಸುತ್ತಿದೆ, ತ್ರಿವಳಿ ತಲಾಖ್ ಮತ್ತು 370 ನೇ ವಿಧಿ ಸೇರಿದಂತೆ ನಾವು ಪ್ರಾರಂಭಿಸಿದ ಮೂರು ಕಾನೂನುಗಳನ್ನು ಜನರು ಚರ್ಚಿಸುತ್ತಿರದ್ದಾರೆ, ಇದನ್ನು, ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ, ಬಿಜೆಪಿಯ ಬಗ್ಗೆ ಜನರು ಸಕಾರಾತ್ಮಕವಾಗಿ ಮಾತನಾಡುವುದು ಅವರಿಗೆ ಇಷ್ಟವಿಲ್ಲ. ಆದ್ದರಿಂದಲೇ ಇಂತಹ ಅವಾಂತರ ಸೃಷ್ಟಿಸಿ ಸಮಸ್ಯೆಯಿಂದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನಿಮ್ಮ ಚುನಾವಣಾ ಯೋಜನೆಗಳೇನು?
ನಮ್ಮ ಚುನಾವಣಾ ಯೋಜನೆಗಳು ಸ್ಪಷ್ಟವಾಗಿವೆ. ನಾವು ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಮತ್ತು ಅದು ನಮ್ಮ ಅಜೆಂಡಾ. ಪ್ರಧಾನಿ ಮೋದಿಯವರ ನಾಯಕತ್ವ ನಮ್ಮ ಮುಖವಾಗಿರುತ್ತದೆ.

ಸಂಸತ್ತಿನ ಭದ್ರತಾ ಲೋಪದ ಪ್ರಕರಣದ ಸ್ಥಿತಿ ಏನು?
ನಾನೀಗ ದೆಹಲಿಯಿಂದ ದೂರ ಇದ್ದೇನೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಯಾವಾಗ ಘೋಷಿಸಲಿದೆ?
ಈ ಬಾರಿ ಮುಂಚಿತವಾಗಿಯೇ ಹೆಸರುಗಳನ್ನು ಪ್ರಕಟಿಸಲಿದ್ದೇವೆ. ನಮ್ಮದು ಪ್ರಜಾಸತ್ತಾತ್ಮಕ ಪಕ್ಷ ಮತ್ತು ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು.

ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಮತ್ತು ಪರಿಷತ್ತಿನ ಪ್ರತಿಪಕ್ಷದ ನಾಯಕರು ಸೇರಿದಂತೆ ಕರ್ನಾಟಕದ ನೂತನ ಬಿಜೆಪಿ ನಾಯಕತ್ವದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕರ್ನಾಟಕದಲ್ಲಿ 25 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಅವರು ನಮಗೆ ಸಹಾಯ ಮಾಡುತ್ತಾರೆ.

ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿ ಬಿಜೆಪಿಗೆ ಹೇಗೆ ವರ್ಕ್ ಔಟ್ ಆಗುತ್ತದೆ?
ವಿಶೇಷವಾಗಿ ಹಳೆ ಮೈಸೂರು ಭಾಗದ ಕೆಲವು ಜಿಲ್ಲೆಗಳಲ್ಲಿ ಅವರು ಉತ್ತಮ ಅಸ್ತಿತ್ವವನ್ನು ಹೊಂದಿದ್ದಾರೆ, ಇದು ನಮಗೆ ಮತ್ತು ಜೆಡಿಎಸ್‌ಗೆ ಸಹ ಸಹಾಯ ಮಾಡುತ್ತದೆ.

ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ನೀವು ಏನು ಹೇಳುತ್ತೀರಿ?
ಕಾಂಗ್ರೆಸ್ ನವರ ಗ್ಯಾರಂಟಿ ಘೋಷಣೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈಗ ಅವರು ಭರವಸೆ ನೀಡಿದಂತೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಅವರು ಹೀನಾಯವಾಗಿ ಸೋಲಲಿದ್ದಾರೆ ಮತ್ತು ಅವರ ಅವನತಿ ಅಲ್ಲಿಂದ ಪ್ರಾರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com