ಡಿಕೆಶಿ ದೆಹಲಿಗೆ ತೆರಳಿದ ಬೆನ್ನಲ್ಲೇ ಗೌಪ್ಯ ಸಭೆ: ಆರು ಸಚಿವರ ಭೋಜನ ಕೂಟ ರಾಜಕೀಯ; ಮೂವರು ಡಿಸಿಎಂಗೆ ಪಟ್ಟು!

ಕಾಂಗ್ರೆಸ್‌ ಸರಕಾರಕ್ಕೆ ಡಿಸಿಎಂ ಹುದ್ದೆ ಸೃಷ್ಟಿಯ ತಲೆನೋವು ಹೆಚ್ಚಾಗುತ್ತಿದ್ದು, ಪ್ರಮುಖ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಬೇಕೇಬೇಕೆಂದು ಹೈಕಮಾಂಡ್‌ ಮುಂದೆ ಬೇಡಿಕೆ ಮಂಡಿಸಲು ಸಮಾನ ಮನಸ್ಕ ಸಚಿವರು ಅಣಿಯಾಗಿದ್ದಾರೆ.
ಪರಮೇಶ್ವರ್, ಸತೀಶ್ ಮತ್ತು ಮುನಿಯಪ್ಪ
ಪರಮೇಶ್ವರ್, ಸತೀಶ್ ಮತ್ತು ಮುನಿಯಪ್ಪ
Updated on

ಬೆಂಗಳೂರು: ಕಾಂಗ್ರೆಸ್‌ ಸರಕಾರಕ್ಕೆ ಡಿಸಿಎಂ ಹುದ್ದೆ ಸೃಷ್ಟಿಯ ತಲೆನೋವು ಹೆಚ್ಚಾಗುತ್ತಿದ್ದು, ಪ್ರಮುಖ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಬೇಕೇಬೇಕೆಂದು ಹೈಕಮಾಂಡ್‌ ಮುಂದೆ ಬೇಡಿಕೆ ಮಂಡಿಸಲು ಸಮಾನ ಮನಸ್ಕ ಸಚಿವರು ಅಣಿಯಾಗಿದ್ದಾರೆ.

ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಯಾಗಬಾರದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸರಕಾರ ರಚನೆ ಸಂದರ್ಭದಲ್ಲೇ ಹೈಕಮಾಂಡ್‌ಗೆ ಷರತ್ತು ವಿಧಿಸಿದ್ದರು. ಆದರೆ ಇದಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಸಚಿವರು ಪಟ್ಟು ಸಡಿಲಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡಲು ಕರ್ನಾಟಕದ ಆರು ಹಿರಿಯ ಸಚಿವರ ಗುಂಪು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲು ನಿರ್ಧರಿಸಿದೆ.

ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಮತ್ತು ಕೆ.ಎನ್.ರಾಜಣ್ಣ ಅವರು ಗುರುವಾರ ಸಂಪುಟ ಸಹೋದ್ಯೋಗಿ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭೋಜನಕೂಟದಲ್ಲಿ ಸಭೆ ನಡೆಸಿ ಹೆಚ್ಚಿನ ಡಿಸಿಎಂಗಳ ಅಗತ್ಯತೆ ಕುರಿತು ಚರ್ಚಿಸಿದರು. ಪರಮೇಶ್ವರ ಮತ್ತು ಸತೀಶ್ ಇಬ್ಬರೂ ಡಿಸಿಎಂ ಹುದ್ದೆಗೆ ರೇಸ್ ನಲ್ಲಿದ್ದಾರೆ.

ನಾವು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ ಮತ್ತು ಸೂಕ್ತ ಸಮಯದಲ್ಲಿ ಹೈಕಮಾಂಡ್‌ ಮುಂದೆ ಬಹಿರಂಗ ಪಡಿಸಲು ನಿರ್ಧರಿಸಿದ್ದೇವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಮೆರಿಕದಿಂದ ಭಾರತಕ್ಕೆ ಮರಳಿದ ನಂತರ ಅವರನ್ನು ಭೇಟಿ ಮಾಡುತ್ತೇವೆ ಎಂದು ಸಹಕಾರ ಸಚಿವ ರಾಜಣ್ಣ ಶುಕ್ರವಾರ ವಿಧಾನಸೌಧದಲ್ಲಿ ತಿಳಿಸಿದರು.

ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಹೆಚ್ಚಿನ ಡಿಸಿಎಂಗಳ ಅಗತ್ಯತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ರಾಜಣ್ಣ ಹೇಳಿದರು, ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡುತ್ತದೆ. ಆದರೆ ನಾವು ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದರು.

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಪೂರ್ವಭಾವಿ ರ್ಯಾಲಿಯಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಕಾಂಗ್ರೆಸ್ ನೀಡಿದ ಭರವಸೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ ಅವರು ಹೇಳಿದರು. ಆದರೆ, ಅದೊಂದು ಗೌಪ್ಯ ಸಭೆ ಎಂದ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಬಲ್ಲ ಮೂಲಗಳ ಪ್ರಕಾರ, ಎಸ್‌ಸಿ ಕೋಟಾದಡಿ ಡಿಸಿಎಂ ಹುದ್ದೆಯ ರೇಸ್‌ನಲ್ಲಿರುವ ಮುನಿಯಪ್ಪ ಅವರು ಎಸ್‌ಸಿ ಕೋಟಾದ ವರ್ಗೀಕರಣಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ. ಮುನಿಯಪ್ಪ ಅವರು ಗುರುವಾರ ಸಂಜೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು.

ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಚಿವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು (ಜಾತಿ ಗಣತಿ) ಒಪ್ಪಿಕೊಳ್ಳಲು ಮುಖ್ಯಮಂತ್ರಿಯವರನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com