'ಜೆಡಿಎಸ್ ಅಂತ್ಯಕ್ಕೆ ಆಡುತ್ತಿರುವ 'ಸಿದ್ದಾರಮೆ ಆಟ' ಯಾರಿಗೆ ಗೊತ್ತಿಲ್ಲ: ನಿಮ್ಮ ರಾಜಕೀಯ ಅಂತ್ಯಕಾಲ ಆನಂದವಾಗಿರಲಿ'

ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅವರ ಹಸ್ತ ಅಭಯ ಹಸ್ತ. ಅದು ಆಶೀರ್ವಾದ, ಅನುಗ್ರಹದ ದ್ಯೋತಕ. ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ?
ಸಿದ್ದರಾಮಯ್ಯ ಮತ್ತು ದೇವೇಗೌಡ
ಸಿದ್ದರಾಮಯ್ಯ ಮತ್ತು ದೇವೇಗೌಡ
Updated on

ಬೆಂಗಳೂರು: ಮಾನ್ಯ ಮಾಜಿ ಪ್ರಧಾನಿಗಳು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ, ದೇಶವನ್ನು ಜಾತಿ,ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅವರ ಹಸ್ತ ಅಭಯ ಹಸ್ತ. ಅದು ಆಶೀರ್ವಾದ, ಅನುಗ್ರಹದ ದ್ಯೋತಕ. ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದೆ.

ಜಾತ್ಯತೀತತೆ ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ.. ಈ ಪದಗಳೆಲ್ಲ ನಿಮಗೆ ಆಗಿ ಬರಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ. ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ ಎಂದು ಜೆಡಿಎಸ್ ಲೇವಡಿ ಮಾಡಿದೆ.

ಮಾನ್ಯ ಎಚ್.ಡಿ ದೇವೇಗೌಡರು  ಸಾಮಾಜಿಕನ್ಯಾಯ, ಜಾತ್ಯತೀತತೆ, ನಂಬಿಕೆ, ವಿಶ್ವಾಸಾರ್ಹತೆ ಉಳ್ಳವರು ಆಗಿಲ್ಲದಿದ್ದಿದ್ದರೆ ನೀವು ಈವರೆಗೆ ಏನೇನೋ ಆಗಿದ್ದಿರಲ್ಲಾ... ಅದರಲ್ಲಿ ಏನೊಂದೂ ಆಗುತ್ತಿರಲಿಲ್ಲ. ನಿಮಗೆ ಏಣಿಯಾಗಿ, ಹೆಗಲಾಗಿದ್ದ ಅವರ ಬೆನ್ನಿಗಿರಿದ 'ಅಪರ ಬ್ರೂಟಸ್' ನೀವು. ಬೂಟಾಟಿಕೆ ಮಾಡಿಕೊಂಡೇ ರಾಜಕೀಯ ಬದುಕು ಕಟ್ಟಿಕೊಂಡವರು ನೀವು.

ಯಾರು, ಯಾರ ಸಂಗ ಮಾಡಿದ್ದರು? ಯಾವ ಗಾಳಿ ಯಾರಿಗೆ ಸೋಕಿತ್ತು? ನಿಮ್ಮ ಇಂಥ ಕಾಗಕ್ಕ,ಗೂಬ್ಬಕ್ಕ ಕಥೆಗಳ ಮೂಲಕ್ಕೆ ಹೋದರೆ ನೀವೇ ಬೆತ್ತಲೆ ಸ್ಥಿತಿಯಲ್ಲಿ ನಿಲ್ಲಬೇಕಾಗುತ್ತದೆ. ಅಂತಹ ಸ್ಥಿತಿ ತಂದುಕೊಳ್ಳಬೇಡಿ. ನಿಮ್ಮ ರಾಜಕೀಯ ಅಂತ್ಯಕಾಲ ಆನಂದವಾಗಿರಲಿ, ಅದಕ್ಕೆ ಕಳಂಕ ಮೆತ್ತಿಕೊಳ್ಳಬೇಡಿ ಎನ್ನುವುದು ನಮ್ಮ ಕಳಕಳಿಯ ಸಲಹೆ.

ನಿಮ್ಮಂಥ ಆತ್ಮಸಾಕ್ಷಿಹೀನರು ಇದ್ದರೆ ಕಾಂಗ್ರೆಸ್ ಅಂತ್ಯವಾಗುತ್ತದೆ, ನಿಜ. ಜೆಡಿಎಸ್ ಪಕ್ಷವನ್ನು ಅಂತ್ಯ ಕಾಣಿಸಲು ನೀವು ಆಡುತ್ತಿರುವ 'ಸಿದ್ದಾರಮೆ ಆಟ' ಯಾರಿಗೆ ಗೊತ್ತಿಲ್ಲ? ಇವತ್ತಿಗೂ ಕತ್ತಲಾದೊಡನೆ ನಮ್ಮ ಪಕ್ಷದ ನಾಯಕರ ಮನೆಗಳ ಮುಂದೆ ಠಳಾಯಿಸುವ ನಿಮ್ಮ ಕತ್ತಲು ಗಿರಾಕಿಗಳ ಬಗ್ಗೆ ಹೇಳಬೇಕೆ? ಜೆಡಿಎಸ್ ಅಂತ್ಯ ನಿಮ್ಮ ಕನಸು ಅಷ್ಟೇ.

ಸೊಕ್ಕು ಎನ್ನುವುದು ನಿಮ್ಮ ಪೇಟೆಂಟ್. ಆ ನಿಮ್ಮ ಸದ್ಗುಣ(!?)ವನ್ನು ದೇವೇಗೌಡರಿಗೆ ಅಂಟಿಸುವ ಪಾಪದ ಕೆಲಸ ಮಾಡಬೇಡಿ. ಕರ್ನಾಟಕದ 'ಸೊಕ್ಕಿನ ಮನುಷ್ಯ' ಅಂತ ಯಾರಾದರೂ ಇದ್ದರೆ ಅದು ತಾವೇ ಸಿದ್ಧರಾಮಯ್ಯನವರೇ. ನಿಮ್ಮ ಪಕ್ಷದ ಪಡಸಾಲೆಗೆ ಬಂದರೆ ಅಲ್ಲಿರುವ ಪ್ರತಿ ಬಾಗಿಲು ನಿಮ್ಮ ಸೊಕ್ಕಿನ ಕಥೆಗಳನ್ನೇ ಹೇಳುತ್ತವೆ.

ಜನಾದೇಶವನ್ನು ದೇವೇಗೌಡರು ಎಂದೂ ಧಿಕ್ಕರಿಸಿಲ್ಲ. ಶಿರಸಾ ವಹಿಸಿದ್ದಾರೆ. ಅಂತಹ ಆಚಾರ, ವಿಚಾರ, ಸದ್ವಿಚಾರ, ಶಿಷ್ಟಾಚಾರವನ್ನು ನಿಮಗೆ ಕಲಿಸಿದ್ದೇ ಅವರು. ಆದರೆ, ಅಡ್ಡದಾರಿ ಆಯ್ಕೆ ಮಾಡಿಕೊಂಡ ನಿಮಗೆ ಇವೆಲ್ಲಾ ರುಚಿಸುತ್ತಿಲ್ಲ. ಸದ್ಯಕ್ಕೆ ನಿಮಗೆ ನೆಲ ಕಾಣುತ್ತಿಲ್ಲ. ನೆಲವೇ ಬುದ್ದಿ ಕಲಿಸುವ ಕಾಲ ಹತ್ತಿರದಲ್ಲಿದೆ. ಕಾಲ ಕ್ಷಣಿಕ ಎಂದಿದೆ.

ಜೆಡಿಎಸ್, ಬಿಜೆಪಿ ಬಿ ಟೀಮ್ ಎನ್ನುವ ನೀವು ಚುನಾವಣೆ ಬಂದಾಗಲೆಲ್ಲಾ ಮಾಡುವ ಮೊದಲ ಕೆಲಸ ಮ್ಯಾಚ್ ಫಿಕ್ಸಿಂಗ್ & ಇನ್ನೊಂದು ಟೀಮ್ ಗೆ ಬಾಲಂಗೋಚಿ ಆಗುವುದು. 2023ರ ವಿಧಾನಸಭೆ ಚುನಾವಣೆಯಲ್ಲೂ ಇದೇ ಆಟ ಅಡಿದಿರಿ. ಆ ನಿಮ್ಮ ರಂಗಿನಾಟ, ಕಳ್ಳಾಟ ದೇಶ ರಾಜಕಾರಣಕ್ಕೆ ಮಾದರಿ!! ಏನಂತೀರಿ?

ಮಾನ್ಯ ದೇವೇಗೌಡರು ಕೇಳಿದ್ದು ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಿರಿ ಎಂದು. ಅವರು ಅದನ್ನೇ ಆಗ್ರಹಿಸಿ ಪತ್ರ ಬರೆದಿದ್ದರು. ನೀವು ಆ ಪಾಯಂಟಿಗೇ ಬರುತ್ತಿಲ್ಲ. ಸತ್ಯದ ಸೊಲ್ಲೆತ್ತದೆ ಸೈಲಂಟಾಗಿ ನೈಸ್ ಅನ್ನು ಪಕ್ಕಕ್ಕೆ ಸರಿಸುತ್ತಿದ್ದೀರಿ. ಯಾಕೆ? ಹೇಳಿಬಿಡಿ ಕಾರಣ.

ನೈಸ್ ಯೋಜನೆ ಸರಕಾರದ ವಶಕ್ಕೆ ಪಡೆಯುವುದು ನಿಮಗೆ ಇಷ್ಟ ಇಲ್ಲದಿದ್ದರೆ ಹೇಳಿ? ಆ ಕಳಂಕ, ಆ ಕಪ್ಪುಚುಕ್ಕೆ ಹೊತ್ತುಕೊಂಡೇ ರಾಜಕೀಯ ಅಂತ್ಯ ಕಾಣಬೇಕೆ? ನಿಮ್ಮ ಹಣೆಯಲ್ಲಿ ಹಾಗೆಯೇ  ಬರೆದಿದ್ದರೆ ಯಾರು ಏನು ಮಾಡಿಯಾರು? ಅಲ್ಲಿಯೂ ಯಾವುದಾದರೂ 'ಅತೀಂದ್ರ ಶಕ್ತಿ' ಅಡಗಿ ಕೂತಿದೆಯಾ? ನಿಮ್ಮ ಮೌನ ಆ ಅನುಮಾನಕ್ಕೆ ಕಾರಣ. ದಯಮಾಡಿ ಮಾತನಾಡಿ ಎಂದು ಜೆಡಿಎಸ್ ಕಿಡಿ ಕಾರಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com