ಲೋಕಸಭೆ ಚುನಾವಣೆಗೆ 100 ದಿನಗಳ ಪ್ರಚಾರ ಯೋಜನೆ ಸಿದ್ದ: ಬಿಜೆಪಿ ನಾಯಕ ಸಿ.ಟಿ ರವಿ

ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವಿನ ಗುರಿಯೊಂದಿಗೆ ಐದು ಹಂತಗಳ 100 ದಿನಗಳ ಪ್ರಚಾರ ಆರಂಭಿಸಲು ಸೋಮವಾರ ನಡೆದ ಬಿಜೆಪಿ ಚಿಂತನ–ಮಂಥನ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಿ.ಟಿ ರವಿ
ಸಿ.ಟಿ ರವಿ

ಬೆಂಗಳೂರು: ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವಿನ ಗುರಿಯೊಂದಿಗೆ ಐದು ಹಂತಗಳ 100 ದಿನಗಳ ಪ್ರಚಾರ ಆರಂಭಿಸಲು ಸೋಮವಾರ ನಡೆದ ಬಿಜೆಪಿ ಚಿಂತನ–ಮಂಥನ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ‘100 ದಿನಗಳ ಚುನಾವಣಾ ಪ್ರಚಾರ ಯೋಜನೆಯೊಂದನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಪಕ್ಷದ ಒಳಗೆ ಮತ್ತು ಸಾರ್ವಜನಿಕವಾಗಿ ನಿರಂತರ ಚಟುವಟಿಕೆಗಳನ್ನು ನಡೆಸುವುದು ಈ ಯೋಜನೆಯ ಗುರಿ’ ಎಂದರು. ನಗರದ ಹೊರ ವಲಯದ ರಮಾಡ ರೆಸಾರ್ಟ್‌ನಲ್ಲಿ ಸಭೆ ನಡೆಯಿತು.

ಮತಗಟ್ಟೆ, ಮಂಡಲ, ಲೋಕಸಭಾ ಕ್ಷೇತ್ರ, ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಚುನಾವಣಾ ಸಿದ್ಧತೆ ಆರಂಭಿಸುವ ಯೋಜನೆಯನ್ನು ಬಿಜೆಪಿ ಅಂತಿಮಗೊಳಿಸಿದೆ.  ಸೈದ್ಧಾಂತಿಕ ಹಿನ್ನೆಲೆಯ ಮತದಾರರು, ವಿವಿಧ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಸರ್ವೋದಯದಿಂದ ಅಂತ್ಯೋದಯ ಎಂಬ ಪರಿಕಲ್ಪನೆಯೊಂದಿಗೆ ನಾವು ಕೆಲಸ ಮಾಡುತ್ತೇವೆ. ಸರ್ವೋದಯ ಎಂದರೆ ಎಲ್ಲರ ಏಳಿಗೆ, ಅಂತ್ಯೋದಯ ಎಂದರೆ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಮೊದಲ ನೆರವು ಎಂದು ಅವರು ಹೇಳಿದರು.

ಲೋಕಸಭೆ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಸಮನ್ವಯತೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು ಎಂದರು. ಪ್ರತಿಯೊಬ್ಬ ಕಾರ್ಯಕರ್ತನೂ ಚುನಾವಣಾ ಕೆಲಸದಲ್ಲಿ ನಿರತರಾಗಬೇಕು.  ಕೆಲವರಿಗೆ ವೈಯಕ್ತಿಕ ನೆಲೆಯಲ್ಲಿ ಅತೃಪ್ತಿ ಇದೆ ಆದರೆ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ಎಲ್ಲರ ಗುರಿಯಾಗಿರುವುದರಿಂದ ಹೈಕಮಾಂಡ್ ಖುದ್ದು ಮಾತನಾಡಿ ಅಸಮಾಧಾನಗೊಂಡ ಬಹುತೇಕರು ಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇರುವುದರಿಂದ ಪಕ್ಷವು ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್’ ಅಡಿಯಲ್ಲಿ ಬಿಜೆಪಿ ಯೋಜನೆ ರೂಪಿಸುತ್ತದೆ ಎಂದು ಹೇಳಿದರು. ಕೆಲವು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಅಭ್ಯರ್ಥಿಗಳೆಂದು ಹೇಳಿಕೊಂಡು ಸ್ಪರ್ಧಿಸಲು ಬಯಸಿದ್ದ ಕಾಂಗ್ರೆಸ್‌ ಸಚಿವರು ಈಗ ಹಿಂದೆ ಸರಿಯಲು ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಎನ್ ಡಿಎ  28 ಸ್ಥಾನಗಳನ್ನು ಮತ್ತು ದೇಶದಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅವರು ಭವಿಷ್ಯ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com