ವಿಜಯಪುರ: ಬಿಜೆಪಿ ಬಹುಮತ ಹೊಂದಿದ್ದರೂ ಕಾಂಗ್ರೆಸ್ ತೆಕ್ಕೆಗೆ ಮಹಾನಗರ ಪಾಲಿಕೆ!
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಮೇಯರ್, ಉಪಮೇಯರ್ ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ಮಹೆಜಬೀನ್ ಅಬ್ದುಲ್ ರಜಾಕ್ ಹೊರ್ತಿ ಹಾಗೂ ಉಪ ಮೇಯರ್ ಆಗಿ ದಿನೇಶ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ 34ನೇ ವಾರ್ಡಿನ ಸದಸ್ಯೆ ಮಹೆಜಬೀನ್ ಹೊರ್ತಿ ಹಾಗೂ ಬಿಜೆಪಿಯಿಂದ 12ನೇ ವಾರ್ಡಿನ ಸದಸ್ಯೆ ರಶ್ಮಿ ನಾಮಪತ್ರ ಸಲ್ಲಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ 18ನೇ ವಾರ್ಡಿನ ಸದಸ್ಯ ದಿನೇಶ್ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
35 ಸದಸ್ಯರಿರುವ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಯಾವೊಂದು ಪಕ್ಷಕ್ಕೂ ನಿಚ್ಚಳ ಬಹುಮತ ಇಲ್ಲದೇ ಪಾಲಿಕೆ ಆತಂತ್ರವಾಗಿತ್ತು. ಬಳಿಕ ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲ ಸದಸ್ಯರು ಹೈಕೋರ್ಟ್ ಮೇಟ್ಟಿಲೇರಿದ್ದ ಕಾರಣ 14 ತಿಂಗಳಿನಿಂದ ಚುನಾವಣೆ ನಡೆದಿರಲಿಲ್ಲ.
ಬಳಿಕ ನಡೆದ ಚುನಾವಣೆಯಲ್ಲಿ ಎಎಂಐಎಂ, ಜೆಡಿಎಸ್ ಮತ್ತು ಪಕ್ಷೇತರರು ಕಾಂಗ್ರೆಸ್ ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮಹೆಜಬೀನ್ ಹೂರ್ತಿ ಮೇಯರ್ ಆಗಿ, ದಿನೇಶ್ ಹಳ್ಳಿ ಉಪ ಮೇಯರ್ ಆಗಿ ಆಯ್ಕೆಯಾದರು.
ನೂತನ ಮಹಾಪೌರರಿಗೆ ಹಾಗೂ ಉಪಮಹಾಪೌರರಿಗೆ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ವಿಜಯಪುರ ಮಹಾನಗರ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ