ದಿನಕ್ಕೊಂದು ಹೇಳಿಕೆ ಬದಲಿಸುವ ವ್ಯಕ್ತಿ ನಾನಲ್ಲ: ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ನಿಖಿಲ್ ಮಾತು!

ಮುಂಬರುವ ಚುನಾವಣೆಯಲ್ಲಿ ಹಾಸನ, ಕೋಲಾರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿರುವ ಜೆಡಿಎಸ್ ನಾಯಕರು ಆ ಕ್ಷೇತ್ರಗಳ ಮುಖಂಡರನ್ನು ಭೇಟಿಯಾಗಲು ಆರಂಭಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಹಾಸನ, ಕೋಲಾರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿರುವ ಜೆಡಿಎಸ್ ನಾಯಕರು ಆ ಕ್ಷೇತ್ರಗಳ ಮುಖಂಡರನ್ನು ಭೇಟಿಯಾಗಲು ಆರಂಭಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಸೋಲಿನ ನಂತರ ರಾಜಕೀಯದಿಂದ ದೂರ ಉಳಿದಿದ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತೆ ಸಕ್ರಿಯರಾಗಿದ್ದಾರೆ. ನಿಖಿಲ್ ಅವರು ಬುಧವಾರ ಮತ್ತು ಗುರುವಾರ ಪಕ್ಷದ ಕಚೇರಿಯಲ್ಲಿ ಕೋಲಾರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ಆಯೋಜಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ನಾನು ಅಕಾಂಕ್ಷಿ ಅಲ್ಲೆಎಂದು ಸ್ಪಷ್ಟಪಡಿಸಿದ್ದಾರೆ.

ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಒಂದು ದಿನ ಒಂದು ರೀತಿ ಮಾತನಾಡಿ, ಮತ್ತೊಂದು ದಿನ ಬೇರೆ ಮಾತನಾಡುವ ವ್ಯಕ್ತಿತ್ವ ನನ್ನದಲ್ಲ. ನಾಳೆ ಮಂಡ್ಯ ಜಿಲ್ಲೆಯ ಸಭೆಯನ್ನು ಮಾಡ್ತಿದ್ದೇವೆ. ಯಾರು ಸ್ಪರ್ಧೆ ಮಾಡಬೇಕೆಂದು ಅಲ್ಲಿ ಚರ್ಚೆಯಾಗುತ್ತದೆ’ ಎಂದು ವಿವರಣೆ ನೀಡಿದರು.

ಮಂಡ್ಯ ಕ್ಷೇತ್ರದಲ್ಲಿ ಯಾರು ನಿಲ್ಲಬೇಕೆಂಬುದು ಚರ್ಚೆ ಆರಂಭವಾಗಿದೆ. ಇದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಸಂಭಾವ್ಯ ಆಕಾಂಕ್ಷಿಗಳನ್ನು ಸಭೆಯಲ್ಲಿ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುತ್ತಾರೆ’ ಎಂದು ಹೇಳಿದರು.

ಎನ್‍ಡಿಎ ಜೊತೆಗಿನ ಜೆಡಿಎಸ್ ಸಂಬಂಧ ಒಳ್ಳೆಯ ಉದ್ಧೇಶದಿಂದ ಮಾಜಿ ಪ್ರಧಾನಿ ದೇವೇಗೌಡರು ನಿರ್ಧಾರ ತೆಗದುಕೊಂಡಿದ್ದಾರೆ. ಪ್ರಧಾನಿ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವವನ್ನು ನಾವೆಲ್ಲಾ ಕಂಡಿದ್ದೇವೆ. ನಮ್ಮನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ. ಹೀಗಾಗಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಅಣ್ಣತಮ್ಮಂದಿರಂತೆ ದುಡಿದು ಗೆಲ್ಲಬೇಕು ಎಂದು ಅವರು ತಿಳಿಸಿದರು.

ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗಣ್ಯರು, ರಾಜಕಾರಣಿಗಳು ಸೇರಿದಂತೆ ಚಿತ್ರರಂಗದವರು ಭಾಗಿಯಾಗಲಿದ್ದಾರೆ. ದಕ್ಷಿಣದ ಕೆಲವೇ ಕೆಲವು ನಟರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಸಿಕ್ಕಿದೆ. ಈಗಾಗಲೇ ಸಾಕಷ್ಟು ನಟರಿಗೆ ಆಹ್ವಾನ ಸಿಕ್ಕಿದೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಆದರೆ ಇಂದು ನಟ ನಿಖಿಲ್ ಕುಮಾರ್ ಅವರಿಗೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಸಿಕ್ಕಿದೆ.

ನಟ ನಿಖಿಲ್ ಕುಮಾರಸ್ವಾಮಿ  ಹಾಗೂ ಇಡೀ ಕುಟುಂಬಕ್ಕೆ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ಪತ್ರಿಕೆ ನೀಡಿದ್ದು, ಜನವರಿ 22ರಂದು ನಡೆಯಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರು ಭಾಗಿಯಾಗಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com