ಸಂಸದ ರಾಘವೇಂದ್ರ ಪರ ಹೇಳಿಕೆ: ಡಿಕೆ ಶಿವಕುಮಾರ್ ಸಿಡಿಮಿಡಿ; ಕಾಂಗ್ರೆಸ್ ಜೀವಂತವಾಗಿದ್ದರೆ ಶಾಮನೂರನ್ನು ಉಚ್ಛಾಟಿಸಿ ಎಂದ ವಿಶ್ವನಾಥ್!

ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಕಾಂಗ್ರೆಸ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 
ಡಿ ಕೆ ಶಿವಕುಮಾರ್-ಶಾಮನೂರು ಶಿವಶಂಕರಪ್ಪ
ಡಿ ಕೆ ಶಿವಕುಮಾರ್-ಶಾಮನೂರು ಶಿವಶಂಕರಪ್ಪ

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಕಾಂಗ್ರೆಸ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಗೆಲ್ಲಬೇಕು ಎಂದು ಕಾಂಗ್ರೆಸ್​​ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೋಪಗೊಂಡಿದ್ದಾರೆ. ಶಾಮನೂರು ಹೇಳಿಕೆಗೆ ತಿರುಗೇಟು ನೀಡಿದ ಅವರು, ಶಿವಮೊಗ್ಗದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್ ಎಂದಿದ್ದಾರೆ.

ಇನ್ನೊಂದೆಡೆ ಚಾಮರಾಜನಗರದಲ್ಲಿ ಮಾತನಾಡಿದ ಎಂ ಎಲ್ಸಿ ಹೆಚ್ ವಿಶ್ವನಾಥ್, ಕಾಂಗ್ರೆಸ್ ಜೀವಂತವಾಗಿದ್ದರೆ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು  ಉಚ್ಛಾಟಿಸಿ ಎಂದಿದ್ದಾರೆ. 

ಸಂಸದ ಬಿ.ವೈ‌.ರಾಘವೇಂದ್ರ ಪರ ಬ್ಯಾಟ್ ಬೀಸಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೀವಂತವಾಗಿದ್ದರೆ ಮೊದಲು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ ನಂತರ ನಿನ್ನೆ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ಜಿಲ್ಲೆಯ ಜನರು ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ, ಈ ಬಾರಿ ಕೂಡ ಬಿ ವೈ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದಿದ್ದಾರೆ. 

ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ, ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಮೋದಿ ಬೆಂಬಲಿಸಿ, ರಾಘವೇಂದ್ರ ಅವರಿಗೆ ಮತ ನೀಡಿ ಎಂದು ಶಾಮನೂರು ಹೇಳಿದ್ದಾರೆ. ಇದು ಏನು ಸಂದೇಶ ನೀಡುತ್ತದೆ ಎಂಬುದು ಗೊತ್ತಲ್ವಾ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ. ಮುಂದೆ ಒಡೆದು ನೂರು ಚೂರು ಆಗಲಿದೆ ಎಂದು ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಘವೇಂದ್ರ ಅವರ ಕಾರ್ಯವನ್ನು ಎಲ್ಲರೂ ಮೆಚ್ಚಿದ್ದಾರೆ. ಅದನ್ನು ಬಹಿರಂಗವಾಗಿ ಪ್ರಕಟಪಡಿಸಿದ್ದಕ್ಕಾಗಿ ಶಾಮನೂರು ಶಿವಶಂಕರಪ್ಪ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಬೇಕು ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಕೂಡ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡಲು ಶೆಟ್ಟರ್ ಕರೆ ನೀಡಿದ್ದರು. ಇದೇ ಶೆಟ್ಟರ್ ಬಿಜೆಪಿ ನಿರ್ಮಾಮ ಮಾಡಿ ಎಂದು ಕರೆ ನೀಡಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com