
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆಯೇ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಕಳೆದ ವಾರ ಒಕ್ಕಲಿಗ ಮಠದ ಚಂದ್ರಶೇಖರ ಸ್ವಾಮೀಜಿ, ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದಾರಿ ಸುಗಮ ಮಾಡಿಕೊಡುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಾಧೀಶ ಚಂದ್ರಶೇಖರ ಸ್ವಾಮಿಗಳ ಮನವಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದು ಸಾರ್ವಜನಿಕವಾಗಿ ಚರ್ಚಿಸಬೇಕಾದ ವಿಷಯವಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಸ್ವಾಮೀಜಿ ಏನು ಹೇಳಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಿದ್ದರಾಮಯ್ಯ ಆಪ್ತ ಸಚಿವರು ಹೆಚ್ಚಿನ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ ಲಿಂಗಾಯತ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಒಕ್ಕಲಿಗ ಸಮುದಾಯದ ಶಿವಕುಮಾರ್ ಸದ್ಯ ಸಿದ್ದರಾಮಯ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಕಳೆದ ವರ್ಷ ಮೇನಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ತದನಂತರ ಕಾಂಗ್ರೆಸ್ ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು ಮತ್ತು ಅವರನ್ನು ಉಪ ಮುಖ್ಯಮಂತ್ರಿ ಮಾಡಿತು. ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ನಂತರ ಉಳಿದ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಸಂಧಾನ ಸೂತ್ರ ಮಾಡಿಕೊಳ್ಳಲಾಗಿದೆ ಎಂಬ ವರದಿಗಳು ಕೇಳಿಬಂದಿತ್ತು. ಆದರೆ ಅದನ್ನು ಪಕ್ಷದಿಂದ ಅಧಿಕೃತವಾಗಿ ದೃಢೀಕರಿಸಿರಲಿಲ್ಲ.
ಶಿವಕುಮಾರ್ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ರಹಸ್ಯವಾಗಿಟ್ಟಿಲ್ಲ. ಆದರೆ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯ ಸಮಯದಲ್ಲಿ ಸಾರ್ವಜನಿಕ ಬೆಂಬಲವನ್ನು ಕೋರಿದ್ದರು. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಗರಿಷ್ಠ ಸಂಖ್ಯೆಯ ಸ್ಥಾನ ಗೆದ್ದರೆ ತಮ್ಮ ಸ್ಥಾನ ಐದು ವರ್ಷ ಅಬಾಧಿತವಾಗಿರುತ್ತದೆ ಎಂದು ಹೇಳಿದ್ದರು.
Advertisement