
ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ವಿದ್ಯುತ್ ಖರೀದಿ ಶುಲ್ಕ ಪಾವತಿಸಲು ಹಾಗೂ ಕಂಪನಿಯ ಇತರೆ ವೆಚ್ಚಗಳನ್ನು ಭರಿಸಲು ಕಷ್ಟಕರವಾಗುತ್ತಿದ್ದು, ಹೆಚ್ಚಿನ ಸಾಲ ಪಡೆಯಲು ಅನುಮತಿ ನೀಡಿ, ಇಲ್ಲವೇ ಸರ್ಕಾರದಿಂದ ಬರಬೇಕಿರುವ ಬಾಕಿಯನ್ನು ಪಾವತಿಸಿ ಎಂದು ಇಂಧನ ಇಲಾಖೆ ಪತ್ರದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪತ್ರವನ್ನು ಹಂಚಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಷ್ಟರ ಮಟ್ಟಿಗೆ ಹದಗೆಡಿಸಿದೆ ಎಂಬುದರ ಸುಸ್ಪಷ್ಟ ನಿದರ್ಶನ.
ಕರ್ನಾಟಕವನ್ನು ಎಲ್ಲಾ ವಲಯಗಳಲ್ಲಿಯೂ ಸಂಪೂರ್ಣ ಬರ್ಬಾದ್ ಮಾಡುವುದೇ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್ ಆಗಿದೆ. ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ ಹಾಳು ಮಾಡಿದ ಸಂಪೂರ್ಣ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಟೀಕಾ ಪ್ರಹಾರ ನಡೆಸಿದೆ.
ಕರ್ನಾಟಕ ಬರ್ಬಾದ್ ಆಗಿದೆ ಎಂಬುದು ನಿಮ್ಮ ಇಂಧನ ಇಲಾಖೆ ಬರೆದ ಪತ್ರದಿಂದಲೇ ಕೊನೆಗೂ ಋಜುವಾತಾಗಿದೆ. ಸಿದ್ದರಾಮಯ್ಯನವರು, ಕರ್ನಾಟಕ ಕಂಡ ಅತ್ಯಂತ ದುರ್ಬಲ ಸಿಎಂ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ.
Advertisement