ED ದಾಳಿ ಅವಶ್ಯಕತೆ ಇರಲಿಲ್ಲ; ಚನ್ನಪಟ್ಟಣದಲ್ಲಿ ಯಾರೇ ನಿಂತರು ನಾನೇ ಅಭ್ಯರ್ಥಿ ಅಲ್ಲವೇ: ಡಿ ಕೆ ಶಿವಕುಮಾರ್

ಬಹಳ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ. ವಂಚನೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಪ್ರಕರಣ ಆಗಬಾರದಾಗಿತ್ತು, ನಡೆದು ಹೋಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ತುಮಕೂರು: ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ. ಹೀಗಾಗಿ ಇ.ಡಿ ( ಜಾರಿ ನಿರ್ದೇಶನಾಲಯ) ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾಜಿ ಸಚಿವ ನಾಗೇಂದ್ರ ಮನೆ ಸೇರಿ ಹಲವು ಕಡೆ ಇ.ಡಿ ದಾಳಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಇಷ್ಟು ದೊಡ್ಡ ಮೊತ್ತದ ಹಗರಣ ಎಂದ ಮೇಲೆ ಬ್ಯಾಂಕ್ ನವರು ತನಿಖೆ ನಡೆಸುವ ಅಧಿಕಾರವಿದೆ. ಇ.ಡಿ ಅವರು ಅವಶ್ಯಕತೆ ಇರದಿದ್ದರೂ ಬಂದಿದ್ದಾರೆ ಎಂದು ಹೇಳಿದರು.

ಎಸ್ ಐಟಿ ರಚನೆ ಮಾಡಿದರೂ ಇ.ಡಿ ತನಿಖೆ ನಡೆಸಲು ಮುಂದುವರೆಯುತ್ತಿದೆ ಎಂದು ಕೇಳಿದಾಗ "ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನಾಗೇಂದ್ರ ಅವರದ್ದು ಯಾವುದೇ ತರದ ತಪ್ಪಿಲ್ಲ. ಕಳಂಕರಹಿತರಾಗಿ ಪ್ರಕರಣದಿಂದ ಹೊರಗಡೆ ಬರುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಹೇಳಿದರು. ಈ ಹಿಂದೆ ಬಿಜೆಪಿ ಕಾಲದಲ್ಲಿಯೂ ಇಂತಹ ಪ್ರಕರಣ ನಡೆದಿರುವ ಉದಾಹರಣೆಗಳಿವೆ. ಬಹಳ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ. ವಂಚನೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಪ್ರಕರಣ ಆಗಬಾರದಾಗಿತ್ತು, ನಡೆದು ಹೋಗಿದೆ ಎಂದು ಹೇಳಿದರು.

ಡಿಕೆ ಶಿವಕುಮಾರ್
ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ-ಶಾಸಕರ ಪಾತ್ರವಿಲ್ಲ; ಅಧಿಕಾರಿಗಳಿಂದ ಹಣ ದುರ್ಬಳಕೆ: ಡಿ.ಕೆ ಶಿವಕುಮಾರ್

ನಾಗೇಂದ್ರ ಅವರ ಮನೆ ಸೇರಿದಂತೆ ನಾಲ್ಕೈದು ಕಡೆ ಇಡೀ ದಾಳಿ ಮಾಡಿದೆ ಎನ್ನುವ ಪ್ರಶ್ನೆಗೆ "ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾಗೇಂದ್ರ ಅವರು ಹಾಗೂ ದದ್ದಲ್ ಅವರಿಗೆ ಎಸ್ ಐಟಿ ನೋಟಿಸ್ ನೀಡಿದೆ. ನಾವು ಆಂತರಿಕವಾಗಿ ಎಲ್ಲಾ ರೀತಿಯಲ್ಲಿ ತನಿಖೆ ಮಾಡಿದ್ದೇವೆ. ಹಗರಣದಲ್ಲಿ ನಮ್ಮ ಶಾಸಕರ, ಸಚಿವರ ಕೈವಾಡ ಇಲ್ಲ ಎಂಬುದನ್ನು ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಏನೇ ಕೇಳಿದರೂ ಉತ್ತರ ಕೊಡುತ್ತಾರೆ" ಎಂದು ತಿಳಿಸಿದರು.

ನಾನು ಮಠಕ್ಕೆ ಬರುವುದು ಸಹಜ

ನೊಣವಿನಕೆರೆ ಮಠಕ್ಕೆ ಭೇಟಿ ಕೊಟ್ಟ ವಿಚಾರವಾಗಿ ಕೇಳಿದಾಗ "ನಾನು ನೊಣವಿನಕೆರೆ ಮಠಕ್ಕೆ ಬರೋದು ಸಹಜ‌. ಇದು ನನ್ನ ನಂಬಿಕೆ ಮತ್ತು ವಿಚಾರ" ಎಂದರು.ಹಂದನಕೆರೆ ಮಠಕ್ಕೆ ಭೇಟಿ ನೀಡಿದ ಬಗ್ಗೆ ಕೇಳಿದಾಗ "ನಾನು ಮಠಕ್ಕೆ ಹೋಗಿರಲಿಲ್ಲ. ಅಲ್ಲಿ ಗವಿ ಸಿದ್ದೇಶ್ವರ ಬೆಟ್ಟಕ್ಕೆ ರಸ್ತೆ ಮಾಡಿಸಿದ್ದೆ. ಅರಣ್ಯ ಇಲಾಖೆಯಿಂದ ತೊಂದರೆ ಇದ್ದ ಕಾರಣಕ್ಕೆ, ಯಾವ ರೀತಿಯ ತೊಂದರೆ ಎದುರಾಗಿದೆ ಎಂದು ತಿಳಿಯಲು ನಾನೇ ಭೇಟಿ ನೀಡಿದ್ದೆ" ಎಂದು ಹೇಳಿದರು.

ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ

ಚನ್ನಪಟ್ಟಣ ಕ್ಷೇತ್ರಕ್ಕೆ ನೀವು ಅಭ್ಯರ್ಥಿಯಾಗುತ್ತೀರಾ ಎನ್ನುವ ಚರ್ಚೆ ನಡೆಯುತ್ತಿದೆ ಎಂದಾಗ "ಚನ್ನಪಟ್ಟಣದಲ್ಲಿ ಯಾರೇ ನಿಂತರು ನಾನೇ ಅಭ್ಯರ್ಥಿ ಅಲ್ಲವೇ?" ಎಂದು ಮಾರ್ಮಿಕವಾಗಿ ಉತ್ತರಿಸಿದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com