
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನವಾದ ಮಂಗಳವಾರವೂ ವಿಧಾನಸಭೆಯಲ್ಲಿ ಗದ್ದಲ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಲೂಟಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗಳ ಅಧೀಕ್ಷಕ ಚಂದ್ರಶೇಖರ್ ಪಿ ಅವರ ಸಾವಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿದ ಆರ್ ಅಶೋಕ್, ಒಂದು ವೇಳೆ ಈ ಆತ್ಮಹತ್ಯೆ ನಡೆಯದಿದ್ದರೆ ಹಗರಣವೇ ಹೊರ ಬರುತ್ತಿರಲಿಲ್ಲ. ಇದರ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಎಷ್ಟು ನ್ಯಾಯಯುತವಾಗಿದೆ ಎಂದು ಪ್ರಶ್ನಿಸಿದರು.
ಎಸ್ಟಿ(ಪರಿಶಿಷ್ಟ ಪಂಗಡ) ಸಮುದಾಯದ ಕಲ್ಯಾಣಕ್ಕೆ ನೀಡಬೇಕಿದ್ದ 187 ಕೋಟಿ ರೂ.ಗಳನ್ನು ಲೂಟಿ ಮಾಡಿ ತೆಲಂಗಾಣಕ್ಕೆ ಕೊಂಡೊಯ್ದಿರುವುದರಿಂದ ಅವರಿಗೆ ಸಲ್ಲಬೇಕಾದ ಸವಲತ್ತುಗಳು ಸಿಕ್ಕಿಲ್ಲ. ಆ ಹಣವನ್ನು ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ಸಿಎಂ ನೀಡಬೇಕು. 224 ಕ್ಷೇತ್ರದ ಮತದಾರರಿಗೆ ತಲುಪಬೇಕಾದ ಹಣ ದುರ್ಬಳಕೆಯಾಗಿದೆ. ದಲಿತರ ಬದುಕಿಗೆ ಸರ್ಕಾರ ಕೊಳ್ಳಿ ಇಟ್ಟಿದೆ. ಶೋಷಿತ ಸಮುದಾಯದ ಹಣ ಲೂಟಿಯಾಗಿದೆ ಎಂದು ಪ್ರತಿಪಕ್ಷ ನಾಯಕ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಅವರಿಗೆ ಹಾಗೂ ಸಚಿವರಿಗೆ ವಿನಂತಿ ಮಾಡುತ್ತೇನೆ. ಎಸ್ಟಿ ಜನಾಂಗದವರ ಮನೆಯಲ್ಲಿ ಒಂದು ದಿನ ವಾಸ್ತವ್ಯ ಮಾಡಿ, ಅವರ ಕಷ್ಟ, ಗೋಳು ನಿಮಗೆ ಗೊತ್ತಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ಕುಟುಂಬ ಬೀದಿಗೆ ಬಂದಿದೆ. ಸಚಿವರಾದ ಮಧು ಬಂಗಾರಪ್ಪ ಹಾಗೂ ಪರಮೇಶ್ವರ್ ಅವರು ಸಾಂತ್ವನ ಹೇಳಿದ್ದಾರೆ. ಮತ್ತ್ಯಾರೂ ಬಂದಿಲ್ಲ ಎಂದು ಚಂದ್ರಶೇಖರ್ ಕುಟುಂಬದವರು ಹೇಳಿದ್ದಾರೆ. ಜೀವ ಒತ್ತೆಯಿಟ್ಟಾದರೂ ನ್ಯಾಯ ಪಡೆಯುವುದಾಗಿ ಚಂದ್ರಶೇಖರ್ ಅವರ ಪತ್ನಿ ಹೇಳಿದ್ದಾರೆ. ಅನ್ಯಾಯವಾಗಿ ಅಮಾಯಕರ ಸಾವಾಗಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರುವುದನ್ನು ಸಿಎಂ ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅಥವಾ ಹಣಕಾಸು ಇಲಾಖೆ ಅಥವಾ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅಶೋಕ್ ಹೇಳಿದರು.
ಹಗರಣದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಸಿಎಂ ಹೇಳಿದ್ದಾರೆ. ಹಗರಣ ಬೆಳಕಿಗೆ ಬಂದು 40 ದಿನಗಳು ಕಳೆದರೂ ಎಸ್‌ಐಟಿ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿರುವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರಿಗೆ ಏಕೆ ನೋಟಿಸ್ ನೀಡಿಲ್ಲ ಎಂದು ಅಶೋಕ್ ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಹೀಗಾಗಿ ಹಣ ಮಂಜೂರಾಗುವುದು, ಹಣ ಖರ್ಚಾಗುವುದು ಎಲ್ಲದರ ಮಾಹಿತಿ ಇರುತ್ತದೆ. ಮಾಹಿತಿ ಇಲ್ಲದಿದ್ದರೆ ಕೇಳಬೇಕಲ್ಲವೇ? ಆ ಇಲಾಖೆಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಯೂ ಮಾತನಾಡಲಿಲ್ಲ ಎಂದು ಟೀಕಿಸಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅವರ ತಂದೆ ಮತ್ತು ಶಾಸಕ ಎಚ್‌ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ಮತ್ತು ಬಿಜೆಪಿ ಶಾಸಕರ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಎಸ್‌ಐಟಿ ತೋರಿಸುತ್ತಿರುವ "ತ್ವರಿತತೆ" ವಾಲ್ಮೀಕಿ ಹಗರಣದಲ್ಲಿ ಏಕೆ ತೋರಿಸುತ್ತಿಲ್ಲ ಎಂದು ಆರ್ ಅಶೋಕ್ ಪ್ರಶ್ನಿಸಿದರು.
ನಂತರ ಮಾತನಾಡಿದ ಬಿಜೆಪಿಯ ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಎರಡು ವಿಷಯಗಳಿವೆ: ಒಂದು ಎಸ್‌ಐಟಿ - ವಿಶೇಷ ತನಿಖಾ ತಂಡ, ಇನ್ನೊಂದು ಎಸ್‌ಎಸ್‌ಐಟಿ - ಸಿದ್ದರಾಮಯ್ಯ ಶಿವಕುಮಾರ್ ತನಿಖಾ ತಂಡ ಎಂದರು. ಇದಕ್ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಚರ್ಚೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, 187 ಕೋಟಿ ರೂ.ಗಳ ಹಗರಣದ ಬಗ್ಗೆ ಹಣಕಾಸು ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂಬುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಶೋಷಿತ ದೀನದಲಿತರಿಗಾಗಿ ಶ್ರಮಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನೇ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ವಿಜಯೇಂದ್ರ ಹೇಳಿಕೆಗೆ ಸಚಿವರು ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೂರು ಏಜೆನ್ಸಿಗಳು ಸಿಬಿಐ, ಇಡಿ ಮತ್ತು ಈಗ ನಮ್ಮ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ನಡೆಸುತ್ತಿರುವಾಗ ವಿಧಾನಸಭೆಯಲ್ಲಿ ಪ್ರಕರಣದ ಕುರಿತು ನಿಲುವಳಿ ಸೂಚನೆ ಮಂಡಿಸಬಾರದಿತ್ತು. ಪ್ರಕರಣದಲ್ಲಿ ಯಾವುದೇ ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ನಾವು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿದರು.
Advertisement