
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣ ಮೂರನೇ ದಿನವಾದ ಗುರುವಾರವೂ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಕೋಲಾಹಲಕ್ಕೆ ಸಾಕ್ಷಿಯಾಯಿತು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ನಿಯಮ-69ರಡಿ ಮಂಡಿಸಿದ ನಿಲುವಳಿ ಸೂಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಉತ್ತರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟರ ಹಣ ಲೂಟಿ ಮಾಡಲಾಗಿದೆ ಎಂದು ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಆಡಳಿತ ಪಕ್ಷದ ಸಚಿವರು, ಶಾಸಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಆಡಳಿತದಲ್ಲಿ ನೀವು ಎಷ್ಟು ಹಗರಣ ಮಾಡಿದ್ದೀರಿ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿಯವರ ಉತ್ತರವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ನಂತರ ರಾಜೀನಾಮೆ ನೀಡಿದ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ರಕ್ಷಿಸುವಂತಿದೆ ಎಂದು ಆರ್ ಅಶೋಕ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಗಮದ ಖಾತೆ ಅಧೀಕ್ಷಕ ಚಂದ್ರಶೇಖರನ್ ಪಿ ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಕೇವಲ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಡೆತ್ ನೋಟ್‌ನಲ್ಲಿ ಅವರ ಸಾವಿಗೆ ಕಾರಣರಾದ ಎಂಡಿ ಜೆ ಜಿ ಪದ್ಮನಾಭ, ಅಕೌಂಟೆಂಟ್ ಪರಶುರಾಮ್ ದುರ್ಗಣ್ಣನವರ್ ಮತ್ತು ಮುಖ್ಯ ಪ್ರಧಾನ ವ್ಯವಸ್ಥಾಪಕ(ಯುಬಿಐ, ಎಂಜಿ ರಸ್ತೆ) ಸುಚಿಸ್ಮಿತಾ ರಾಹುಲ್ ಅವರ ಹೆಸರುಗಳಿವೆ ಎಂದು ವಿಧಾನಸಭೆಗೆ ತಿಳಿಸಿದರು.
ತಮ್ಮ ದೂರಿನಲ್ಲಿ ಚಂದ್ರಶೇಖರನ್ ಅವರ ಪತ್ನಿ ಕವಿತಾ ಕೂಡ ಈ ಮೂವರು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಆತ್ಮಹತ್ಯೆ ನಡೆದು ಎರಡು ದಿನಗಳ ನಂತರ, ಮೇ 28 ರಂದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎ ರಾಜಶೇಖರ್ ಅವರು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ವಿರುದ್ಧ ದೂರು ದಾಖಲಾಗಿಲ್ಲ. ಕೇವಲ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಗಮನ ಸೆಳೆದರು.
ಡೆತ್ ನೋಟ್‌ನಲ್ಲಿ ಪದ್ಮನಾಭ, ದುರ್ಗಣ್ಣನವರ್ ಮತ್ತು ಅವರ ಸಾವಿಗೆ ಕಾರಣರಾದ ಯುಬಿಐನ ಎಂಜಿ ರೋಡ್ ಶಾಖೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಚಿಸ್ಮಿತಾ ರಾಹುಲ್ ಅವರ ಹೆಸರುಗಳಿವೆ.
ಡೆತ್ ನೋಟ್ ಅನ್ನು ನಾವು ಸತ್ಯವೆಂದು ಪರಿಗಣಿಸಬೇಕು ಎಂದು ಅಶೋಕ್ ಹೇಳಿದ್ದಾರೆ ಎಂದು ಮುಖ್ಯಮಂತ್ರಿಗಳು ಪ್ರತಿಪಕ್ಷಗಳಿಗೆ ನೆನಪಿಸಿದರು.
ಸಚಿವರ ಹೆಸರನ್ನು ಏಕೆ ಸೇರಿಸಲಿಲ್ಲ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದಾಗ, ಸಿದ್ದರಾಮಯ್ಯ ಅವರ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ. ನೀವು ತಪ್ಪು ಮಾಡಿದ್ದರೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ಸಚಿವರು ಮೌಖಿಕ ಸೂಚನೆ ನೀಡಿದ್ದಾರೆ ಎಂದು ಸೂಸೈಡ್ ನೋಟ್‌ನಲ್ಲಿ ಬರೆಯಲಾಗಿದೆ ಎಂದು ಜ್ಞಾನೇಂದ್ರ ಮತ್ತು ಬೆಲ್ಲದ್ ಸಿಎಂಗೆ ತಿಳಿಸಿದರು. ಆದರೆ ದೂರಿನಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ.
ಯಾರನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದ್ದೀರಿ, ಹಾಗಾದರೆ ಮಾಜಿ ಸಚಿವರನ್ನು ಏಕೆ ರಕ್ಷಿಸುತ್ತಿದ್ದೀರಿ? ಕವಿತಾ ಅವರು ಮೇ 27 ರಂದು ಮಧ್ಯರಾತ್ರಿ 2 ಗಂಟೆಗೆ ದೂರು ನೀಡಿದ್ದು, ಅದರಲ್ಲಿ ಅವರು ಸಚಿವರ ಹೆಸರು ಇತ್ತು ಎಂದು ಜ್ಞಾನೇಂದ್ರ ಆರೋಪಿಸಿದರು.
ಪ್ರತಿಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗಿಯಾಗಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸಿದರು. ಇದಕ್ಕೆ ಪ್ರತಿಯಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ, ಹೆಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಶಾಸಕ ನರೇಂದ್ರ ಸ್ವಾಮಿ, ಪ್ರಕಾಶ್ ಕೋಳಿವಾಡ ಸೇರಿದಂತೆ ಹಲವರು ಪ್ರತಿಪಕ್ಷದ ಶಾಸಕರ ಟೀಕೆಗೆ ಅಡ್ಡಿ ಉಂಟುಮಾಡಿ ತಿರುಗೇಟು ನೀಡಿದರು.
Advertisement