
ಬೆಂಗಳೂರು: ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯು ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಎಸ್ ಸಿ ಸಮುದಾಯದ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿ ಛಲವಾದಿ ನಾರಾಯಾಣಸ್ವಾಮಿಗೆ ಅಭಿನಂದನೆ ತಿಳಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ನಿಂತು ಹೋರಾಟ ನಡೆಸಿಕೊಂಡು ಬಂದ ಹಿನ್ನಲೆಯ ಛಲವಾದಿ ನಾರಾಯಣ ಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಟರು ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ 'ಸಾಮಾಜಿಕ ನ್ಯಾಯ' ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಟ್ವೀಟಿಸಿದ್ದಾರೆ.
ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಇದೀಗ ಪಕ್ಷವು ವಿಪಕ್ಷ ನಾಯಕನ ಸ್ಥಾನಕ್ಕೆ ಛಲವಾದಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದೆ.
ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತ ಹೊಂದಿದೆ. ಕಾಂಗ್ರೆಸ್ 35 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ - 25 ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ 8 ಮತ್ತು ಸ್ವತಂತ್ರ ಸದಸ್ಯರನ್ನು ಸೇರಿಸಿದರೆ ಒಟ್ಟು 38 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್‌ನಿಂದ ಬಿಜೆಪಿಗೆ ಬದಲಾದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೈತ್ರಿಯಿಂದ ಆಯ್ಕೆಯಾಗಿದ್ದಾರೆ.
Advertisement