
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದನದಲ್ಲಿ ಪಟ್ಟು ಹಿಡಿಯಿತು. ಆದರೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ಚರ್ಚೆಗೆ ಅವಕಾಶ ನಿರಾಕರಿಸಿದರು.
ಇಂದು ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್, ನಿಯಮಾವಳಿಗಳನ್ನು ಉಲ್ಲೇಖಿಸಿ, ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡದಂತೆ ಸ್ಪೀಕರ್‌ಗೆ ಒತ್ತಾಯಿಸಿದರೆ, ಪ್ರತಿಪಕ್ಷ ಬಿಜೆಪಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು. ಬಿಜೆಪಿ ಆಗ್ರಹಕ್ಕೆ ಮಣಿಯದ ಸ್ಪೀಕರ್, ಚರ್ಚೆಗೆ ಅವಕಾಶ ನಿರಾಕರಿಸದರು ಮತ್ತು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅಲ್ಲಿ ಹೋಗಿ ದಾಖಲೆ ಕೊಡಿ ಎಂದು ಹೇಳಿದರು.
ಈ ವೇಳೆ ಸ್ಪೀಕರ್ ಯು.ಟಿ ಖಾದರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸ್ಪೀಕರ್ ಒನ್ ಸೈಡ್, ಸಿಎಂಗೆ ಮುಡಾ ಸೈಟ್ ಎಂಬ ಘೋಷಣೆ ಕೂಗಿದರು.
ಪ್ರತಿಪಕ್ಷ ಸದಸ್ಯರಿಗೆ ಕುಳಿತ ಕೊಳ್ಳುವಂತೆ ಸ್ಪೀಕರ್ ಮನವಿ ಮಾಡಿದರೂ, ಸದನದ ಬಾವಿಗಿಳಿದ ಬಿಜೆಪಿ- ಜೆಡಿಎಸ್ ಸದಸ್ಯರಿಂದ ಧರಣಿ ನಡೆಸಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಹತ್ತು ನಿಮಿಷಗಳ ಕಾಲ ಸ್ಪೀಕರ್ ಖಾದರ್ ಮುಂದೂಡಿದರು.
ಕಲಾಪ ಮತ್ತೆ ಆರಂಭವಾದಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ನಿಯಮಗಳ ಪ್ರಕಾರ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದರು.
ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಇಂದಿನಿಂದ ಸದನದಲ್ಲಿ ರಾತ್ರಿಯಿಡೀ ಧರಣಿ ನಡೆಸುವುದಾಗಿ ಘೋಷಣೆ ಮಾಡಿದರು.
ಮೂಡ ಹಗರಣದಲ್ಲಿ ಸರ್ಕಾರ ಹೆದರಿ ಓಡಿ ಹೋಗಿದೆ. ಹೇಡಿಗಳಂತೆ ಸರ್ಕಾರದ ನಡೆದುಕೊಳ್ಳುತ್ತಿದೆ. 14 ಮೂಡ ಸೈಟ್ ನ್ಯಾಯಯುತವಾಗಿ ತೆಗೆದುಕೊಂಡಿದ್ದೇವೆ ಎಂದು ಸಿಎಂ ಸದನದಲ್ಲಿ ಹೇಳಬೇಕು. ಕೇವಲ ಹೊರಗಡೆ ಸಿಎಂ ಹೇಳುವುದಲ್ಲ. ದಲಿತರ ಜಾಗವನ್ನು ಲೂಟಿ ಹೊಡೆಯುವ ಕೆಲಸ ಆಗಿದೆ. ಸಿದ್ದರಾಮಯ್ಯ ಡಿಸಿಎಂ, ಸಿಎಂ ಆಗಿದ್ದಾಗ ಮೂಡ ಹಗರಣ ಆಗಿದೆ. ದಲಿತರ ಜಮೀನು ಲೂಟಿ ಹೊಡೆದು ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸದರು.
ದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಸಿಎಂ ಕುಟುಂಬಕ್ಕೆ ನೀಡಿದ ಸೈಟ್ ವಾಪಸ್ ಪಡೆಯಬೇಕು. ಸುಮಾರು ಐದು ಸಾವಿರ ನಿವೇಶನಗಳನ್ನು ಮನಬಂದಂತೆ ಹಂಚಲಾಗಿದೆ. ಅದು ಕೂಡಾ ವಾಪಸ್ ಬರಬೇಕು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
Advertisement