
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಸತತವಾಗಿ ಮುನ್ನಡೆ ಸಾಧಿಸಿದ್ದರು. ಇದೀಗ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸುವ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಗೆಲುವಿನ ನಗೆ ಬೀರಿದ್ದಾರೆ.
ಮತ್ತೆ ಅಭೂತಪೂರ್ವ ಮುನ್ನಡೆ ಸಾಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರು, 7,27,393 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರು 4,70,215 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ್ ಪೂಕಾರಿ ಅವರು 2,57,178 ಮತಗಳ ಮುನ್ನಡೆ ಸಾಧಿದ್ದಾರೆ. ಜೊತೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 11,223 ರಷ್ಟು ಮತಗಳು ನೋಟಾ ಬಂದಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮಣೆ ಹಾಕಿತ್ತು. ಇದೀಗ ಕೋಟ ಶ್ರೀನಿವಾಸ್ ಪೂಜಾರಿ ಅವರು ಗೆಲುವು ಸಾಧಿಸುವ ಮೂಲಕ ಪಕ್ಷದ ಪತಾಕೆ ಹಾರಿಸಿದ್ದಾರೆ.
ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಒಟ್ಟು 9,63,738 ಮತದಾರರಿದ್ದು, 4,75, 419 ಪುರುಷ ಮತದಾರರು ಹಾಗೂ 4,88,284 ಮಹಿಳಾ ಮತದಾರರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಈ ಬಾರಿಯೂ ಬಿಜೆಪಿ ಪಾಲಾಗಿದೆ.
Advertisement