ಜುಲೈ 12 ರಂದು ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಉಪಚುನಾವಣೆಗೆ ಜೂನ್ 25 ರಂದು ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ ಎರಡು ಕೊನೆಯ ದಿನಾಂಕವಾಗಿದೆ.
ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಜನವರಿ 24 ರಂದು ಶೆಟ್ಟರ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ತೆರವಾಗಿತ್ತು. ಅವರ ಅವಧಿ ಜೂನ್ 2028 ರಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ 68 ವರ್ಷದ ಮಾಜಿ ಸಿಎಂ ಜನವರಿಯಲ್ಲಿ ಬಿಜೆಪಿಗೆ ಮರಳಿದ ನಂತರ ಕಾಂಗ್ರೆಸ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಂತರ ಬಿಜೆಪಿಯಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಜಗದೀಶ್ ಶೆಟ್ಟರ್ ಅವರು ಈಗ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ