
ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಸ್ಥಾನ ಸಿಕ್ಕಿರುವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ನ್ನು ಒಕ್ಕಲಿಗ ಸಮುದಾಯದ ಬೆಂಬಲ ಪಡೆದು ವಿವಿಧ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪುನರ್ ಸಂಘಟಿಸುವ ಜವಾಬ್ದಾರಿ ಇದೆ. ಈ ಎರಡು ಜವಾಬ್ದಾರಿಗಳು ಅವರ ಹೆಗಲ ಮೇಲಿದೆ.
ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆಯಿದ್ದು, ನಿನ್ನೆ ಸೋಮವಾರ ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಕುಂಚಟಿಗ-ಒಕ್ಕಲಿಗ ಧರ್ಮಗುರು ನಂಜಾವಧೂತ ಸ್ವಾಮಿ ಹಾಗೂ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ದರ್ಶನ ಪಡೆದರು.
ಭೇಟಿಯ ವೇಳೆ ಕುಂಚಟಿಗ-ಒಕ್ಕಲಿಗರಿಗೆ ಜಾತಿಗಳ ಪಟ್ಟಿಯಲ್ಲಿ ಒಬಿಸಿ ಗುರುತು, ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡುವುದಾಗಿ ಭರವಸೆ ನೀಡಿದರು. ಮರುವರ್ಗೀಕರಣ ಮಾಡಲು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಮ್ಮ ಭೇಟಿ ವೇಳೆ ಇಲ್ಲಿನ ಈ ಸಮುದಾಯಗಳ ಜನರಿಗೆ ಭರವಸೆ ನೀಡಿದರು.
ಕುಮಾರಸ್ವಾಮಿ ಭಾನುವಾರ ಆದಿಚುಂಚನಗಿರಿ ಮಠದ ಒಕ್ಕಲಿಗ ಸಮುದಾಯದ ಗುರು ನಿರ್ಮಲಾನಂದನಾಥ ಸ್ವಾಮಿಗಳನ್ನು ಭೇಟಿ ಮಾಡಿದರು. ಕುಂಚಟಿಗ ಒಕ್ಕಲಿಗರ ಉಪ ಪಂಗಡದ ಸದಸ್ಯರು ಸೇರಿದಂತೆ ಒಕ್ಕಲಿಗರು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಅದರ ಮೈತ್ರಿ ಪಾಲುದಾರ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗುತ್ತದೆ. ಮಂಡ್ಯ, ಕೋಲಾರ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು, ಲಿಂಗಾಯತರು ಮತ್ತು ಸ್ವಲ್ಪ ಮಟ್ಟಿಗೆ ಕಾಡುಗೊಲ್ಲರು ಬಿಜೆಪಿ-ಜೆಡಿಎಸ್ ಮೈತ್ರಿ ಪರವಾಗಿ ಕೆಲಸ ಮಾಡಿದ್ದಾರೆ.
ಇದೀಗ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಶಕ್ತಿ ವರ್ಧನೆಗೆ ಕುಮಾರಸ್ವಾಮಿ ಅವರು ಹುಮ್ಮಸ್ಸಿನಿಂದ ಕೆಲಸ ಮುಂದುವರಿಸಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 2007ರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಂದವನ್ನು ಪಾಲಿಸಲು ನಿರಾಕರಿಸಿ ಬಿಎಸ್ ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆಯ ಅಧಿಕಾರ ಹಸ್ತಾಂತರಿಸದೇ ಇದ್ದಾಗ ಜೆಡಿಎಸ್ ವೀರಶೈವ-ಲಿಂಗಾಯತರ ವಿಶ್ವಾಸ ಕಳೆದುಕೊಂಡಿತ್ತು. ಡಿಕೆ ಶಿವಕುಮಾರ್ ಸಮುದಾಯದ ಪರ್ಯಾಯ ನಾಯಕರಾಗಿ ಹೊರಹೊಮ್ಮಿದ್ದರಿಂದ ಒಕ್ಕಲಿಗರ ಒಂದು ವರ್ಗವೂ ಪಕ್ಷದಿಂದ ದೂರ ಸರಿದಿತ್ತು. ಈಗ ಸಂಖ್ಯಾಬಲದ ಎರಡು ಸಮುದಾಯಗಳ ವಿಶ್ವಾಸವನ್ನು ಮರಳಿ ಪಡೆಯಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ ಕುಮಾರಸ್ವಾಮಿ, ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ವಿರೋಧ ಪಕ್ಷ ಕಾಂಗ್ರೆಸ್‌ನ ಅನುಮಾನವನ್ನು ತಳ್ಳಿಹಾಕಿದರು. ಈ ಆರೋಪಗಳು ಆಧಾರರಹಿತವಾಗಿವೆ. ಹಾಗಾದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡುವ ಮೂಲಕ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದೆಯೇ ಎಂದು ಪ್ರಶ್ನಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಇಂಧನ ಬೆಲೆ ಹೆಚ್ಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೃಷಿ ಸಾಲ ಮನ್ನಾ ಮಾಡಲು 25 ಸಾವಿರ ಕೋಟಿ ಕ್ರೋಡೀಕರಿಸಲು ಯತ್ನಿಸಿದ್ದೆ, ಆದರೆ ಸಿದ್ದರಾಮಯ್ಯನವರು ಅದನ್ನು ಮಾಡಲು ಬಿಡಲಿಲ್ಲ. ತಾವು ಕರ್ನಾಟಕದಲ್ಲಿ ಸ್ಥಾವರಗಳನ್ನು ಸ್ಥಾಪಿಸಲು ಕೈಗಾರಿಕೆಗಳ ಬಗ್ಗೆ ಗಮನ ಹರಿಸಿದ್ದೆ ಎಂದರು. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಬಹುದಿನಗಳ ಬೇಡಿಕೆ ಇದ್ದು, ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಆ ಬಗ್ಗೆ ಕಾಳಜಿ ವಹಿಸಲಾಗುವುದು ಎಂದರು.
Advertisement