
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರೂ ನಮ್ಮ ಪಕ್ಷದ ಎರಡು ಕಣ್ಣುಗಳಿದ್ದಂತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಕೊರೊನಾ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಮಾಸ್ ಲೀಡರ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಬ್ಬರೂ ಕಾಂಗ್ರೆಸ್ ನ ಎರಡೂ ಕಣ್ಣು ಇದ್ದ ಹಾಗೆ. ಸಿದ್ದರಾಮಯ್ಯನವರು ನಮ್ಮ ಪಕ್ಷ ಕೊಟ್ಟ ಮಾತಿನಂತೆ ಅತ್ಯಂತ ಸಮರ್ಥವಾಗಿ ಯೋಜನೆಗಳನ್ನು ಜಾರಿ ಮಾಡಿ ಸಮರ್ಥವಾಗಿ ಆಡಳಿತ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.
ನಮ್ಮ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಒಳ್ಳೆಯ ಮುಖ್ಯಮಂತ್ರಿಯನ್ನು ನೇಮಕ ಮಾಡಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೆ ಅಂತಿಮ. ಈಗಾಗಲೇ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಯನ್ನು ಈಡೇರಿಸಿ ಮುಂದೆ ಹೋಗುತ್ತಿದ್ದೇವೆ ಎಂದರು.
ನಾನು ತಳಮಟ್ಟದದಿಂದ ಬಂದ ಕಾರ್ಯಕರ್ತೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅದು, ಅವರ ವೈಯಕ್ತಿಕ ಅಭಿಪ್ರಾಯ ಎಂದರು. ನಾಯಕತ್ವ ಬದಲಾವಣೆಯ ವಿಷಯವು ಕಾಂಗ್ರೆಸ್ಸಿನ ಆಂತರಿಕ ವಿಷಯವಾಗಿದ್ದು ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಇಂತಹ ವಿಷಯಗಳ ಬಗ್ಗೆ ಸಾರ್ವಜನಿಕ ಚರ್ಚೆಯ ಅಗತ್ಯವಿಲ್ಲ ಎಂದರು.
Advertisement