ಕೊಟ್ಟ ಭರವಸೆ ಈಡೇರಿಸಿಲ್ಲ; ಲೋಕಸಭೆಗೆ ನಾನು, ಪುತ್ರ ಇಬ್ಬರೂ ಸ್ಪರ್ಧಿಸಲ್ಲ: ಸಿಎಂ ವಿರುದ್ಧ ಪ್ರಕಾಶ ಹುಕ್ಕೇರಿ ಕಿಡಿ

ಈ ಕಡೆ ಒದ್ದ ಮೇಲೆ ಆ ಕಡೆ ಹೋಗೋದು, ಆ ಕಡೆ ಒದ್ದರೆ ಈ ಕಡೆ ಬರುವುದಕ್ಕೆ ನಾನೇನು ಫುಟ್ಬಾಲ್ ಅಲ್ಲ. ಲೋಕಸಭೆಗೆ ನಾನು ಮತ್ತು ನನ್ನ ಪುತ್ರ ಗಣೇಶ ಹುಕ್ಕೇರಿ ಇಬ್ಬರೂ ಸ್ಪರ್ಧಿಸುವುದಿಲ್ಲ.
ಪ್ರಕಾಶ್ ಹುಕ್ಕೇರಿ
ಪ್ರಕಾಶ್ ಹುಕ್ಕೇರಿ

ಬೆಳಗಾವಿ: ಈ ಕಡೆ ಒದ್ದ ಮೇಲೆ ಆ ಕಡೆ ಹೋಗೋದು, ಆ ಕಡೆ ಒದ್ದರೆ ಈ ಕಡೆ ಬರುವುದಕ್ಕೆ ನಾನೇನು ಫುಟ್ಬಾಲ್ ಅಲ್ಲ. ಲೋಕಸಭೆಗೆ ನಾನು ಮತ್ತು ನನ್ನ ಪುತ್ರ ಗಣೇಶ ಹುಕ್ಕೇರಿ ಇಬ್ಬರೂ ಸ್ಪರ್ಧಿಸುವುದಿಲ್ಲ. ಚಿಕ್ಕೋಡಿ ಲೋಕಸಭೆ ಟಿಕೆಟ್ ಕುರುಬ ಸಮಾಜಕ್ಕೆ ಕೊಟ್ಟರೆ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾಂಗ್ರೆಸ್ ಹಿರಿಯ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, 2014 ರಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಮಂತ್ರಿ ಇದ್ದರೂ ಲೋಕಸಭೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದೆ. ಆಗ ಪುತ್ರ ಗಣೇಶ ಹುಕ್ಕೇರಿಯನ್ನು ಶಾಸಕನನ್ನಾಗಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ವರಿಷ್ಠರು ಭರವಸೆ ಕೊಟ್ಟಿದ್ದರು.

ಆದರೆ, ಪುತ್ರ ಗಣೇಶ ಶಾಸಕನಾದರೂ ಬಳಿಕ ಮಂತ್ರಿ ಮಾಡಿಲ್ಲ. 2023 ರ ಚುನಾವಣೆಯಲ್ಲಿ ಗಣೇಶ 78 ಸಾವಿರ ಮತಗಳ ಅಂತರದಿಂದ ಗೆದ್ದರೂ ಸಚಿವ ಸ್ಥಾನ ನೀಡಿಲ್ಲ. ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನ ಕೇಳಿಲ್ಲ, ಕೇಳುವುದೂ ಇಲ್ಲ ಎಂದರು.

ಈಗ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡಗಳು ಬರುತ್ತಿದೆ. ನಾನು‌ ಸ್ಪರ್ಧೆ ಮಾಡಿದರೆ ಚಿಕ್ಕೋಡಿ ಲೋಕಸಭೆಯಲ್ಲಿ ಗೆಲ್ಲುತ್ತೇವೆ ಅಂತಾ ಲೆಕ್ಕಾಚಾರವಿದೆ. ಆದರೆ, ನಾನು ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ.

ಪ್ರಕಾಶ್ ಹುಕ್ಕೇರಿ
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ನನ್ನನ್ನು ಏನು ಫುಟ್ಬಾಲ್ ರೀತಿ ತಿಳಿದಿದ್ದಾರೇನೋ: ಪ್ರಕಾಶ್ ಹುಕ್ಕೇರಿ

ನನ್ನ ವಯಸ್ಸು ಈಗ 78 ವರ್ಷ. ಮೇಲಾಗಿ ನನ್ನ ಎಂಎಲ್​ಸಿ ಅಧಿಕಾರಾವಧಿ ಇನ್ನೂ 4 ವರ್ಷವಿದೆ. ನನ್ನನ್ನು ನಂಬಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಶಿಕ್ಷಕರು ಮತ ಹಾಕಿ ಗೆಲ್ಲಿಸಿದ್ದಾರೆ. ನನಗೆ ಮತ ನೀಡಿದ ಶಿಕ್ಷಕರಿಗೆ ಮೋಸ ಮಾಡುವುದಿಲ್ಲ ಎಂದು ತಿಳಿಸಿದರು.

ಈಗಾಗಲೇ ಬೆಳಗಾವಿ ಟಿಕೆಟ್​ಗೆ ಲಿಂಗಾಯತ, ಚಿಕ್ಕೋಡಿಗೆ ಕುರುಬ ಸಮುದಾಯ ಅಂತಾ ಚರ್ಚೆ ಆಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 3 ಲಕ್ಷ ಕುರುಬ ಸಮುದಾಯದರು ಇದ್ದಾರೆ. ಕುರುಬ ಸಮುದಾಯದ ಮುಖಂಡ ಲಕ್ಷ್ಮಣರಾವ್ ಚಿಂಗಳೆಗೆ ಟಿಕೆಟ್ ಕೊಡಿ, ನಾವೆಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಪ್ರಕಾಶ ಹುಕ್ಕೇರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com