ಮೈಸೂರು-ಕೊಡಗು ಕ್ಷೇತ್ರ: ಹೊಸ ಅಭ್ಯರ್ಥಿಗೆ ಮಣೆ; ಆತಂಕ, ಅನಿಶ್ಚಿತತೆಗೆ ಕಾರಣವಾದ ಪ್ರತಾಪ್ ಸಿಂಹ ಮಾತು-ವರ್ತನೆ!

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ತೀವ್ರ ಕುತೂಹಲ ಮನೆಮಾಡಿರುವ ಹೊತ್ತಿನಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿರುವ ಆಂತರಿಕ ಭಿನ್ನಮತ ಮುನ್ನಲೆಗೆ ಬಂದಿದೆ.
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ

ಮೈಸೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ತೀವ್ರ ಕುತೂಹಲ ಮನೆಮಾಡಿರುವ ಹೊತ್ತಿನಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿರುವ ಆಂತರಿಕ ಭಿನ್ನಮತ ಮುನ್ನಲೆಗೆ ಬಂದಿದೆ.

ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸ ಮತ್ತು ಪ್ರಖರ ಹಿಂದುತ್ವವಾದವನ್ನಿಟ್ಟುಕೊಂಡು ಸತತ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಪ್ರತಾಪ್ ಸಿಂಹ ಅವರಿಗೆ ಹೈಕಮಾಂಡ್ ಹೊಸ ಮುಖಕ್ಕೆ ಈ ಬಾರಿ ಮಣೆ ಹಾಕುತ್ತಿರುವ ಸುಳಿವು ಸಿಕ್ಕಿರುವುದು ತೀವ್ರ ಅಸಮಾಧಾನ, ಬೇಸರಕ್ಕೆ ಕಾರಣವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಬೆಂಬಲಿಗರು ಒಂದೆಡೆ ತಮ್ಮ ನಾಯಕನಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿಯುತ್ತಿದ್ದರೆ ಇತ್ತ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆ, ಆಂದೋಲನವೇ ನಡೆಯುತ್ತಿದೆ. ಇದು ಬಿಜೆಪಿ ರಾಜ್ಯ ನಾಯಕರನ್ನು ಆತಂಕಕ್ಕೆ ಎಡೆಮಾಡಿಕೊಟ್ಟಿರುವುದಂತೂ ನಿಜ.

ತಮ್ಮನ್ನು ಬಿಟ್ಟು ಬೇರೆಯವರಿಗೆ ಈ ಬಾರಿ ಟಿಕೆಟ್ ನೀಡುತ್ತಿರುವುದು ಪ್ರತಾಪ್ ಸಿಂಹ ಅವರನ್ನು ಹತಾಶೆಗೆ ತಳ್ಳಿರುವುದಂತೂ ಅವರು ಬಹಿರಂಗವಾಗಿ ಇತ್ತೀಚೆಗೆ ಮಾಧ್ಯಮಗಳ ಮುಂದೆ ನೀಡುತ್ತಿರುವ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಪಕ್ಷದ ನಾಯಕರನ್ನು ಅವರು ನೇರವಾಗಿ ಹಳಿಯುವ ಬದಲು ತಮ್ಮೊಳಗಿರುವ ನೋವು, ಹತಾಶೆಯನ್ನು ಇತರ ವೇದಿಕೆಗಳ ಮೂಲಕ ಪಕ್ಷದ ನಾಯಕರಿಗೆ, ಹೈಕಮಾಂಡ್ ಗೆ ತಲುಪಿಸುವ ಯತ್ನ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯ, ಮಡಿವಾಳ ಸಮುದಾಯ ಮತ್ತು ಮೈಸೂರು ರಕ್ಷಣಾ ವೇದಿಕೆಗಳು ಸಂಸದ ಪ್ರತಾಪ್ ಸಿಂಹ ಅವರ ಪರ ನಿಂತು ಪತ್ರಿಕಾಗೋಷ್ಠಿಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಮಾತನಾಡುತ್ತಿವೆ.

ಸಂಸದ ಪ್ರತಾಪ್ ಸಿಂಹ
ಇಂದು ರಾಜ್ಯದ 15 ರಿಂದ 18 ಲೋಕಸಭೆ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ

ಮೊನ್ನೆ ಸೋಮವಾರ ರಾತ್ರಿ 10 ಗಂಟೆಗೆ ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್ ಬಂದು ತಮ್ಮ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ತಾವು ಸಂಸದರಾಗಿ ಮಾಡಿರುವ ಕೆಲಸಗಳ ಬಗ್ಗೆ ಮಾತನಾಡುತ್ತಾ ಭಾವಪರವಶರಾದರು. ಕೊಡಗಿನ ಜನತೆಯನ್ನು ದೇಶಭಕ್ತರು ಎಂದು ಕೊಂಡಾಡಿದ ಅವರು, ಮೈಸೂರು ಜನರು ಜಾತೀವಾದಿಗಳು ಎಂದು ವ್ಯಾಖ್ಯಾನಿಸಿ ಸ್ಥಳೀಯ ರಾಜಕಾರಣದಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಯದುವೀರ್ ಸ್ಪರ್ಧೆಯ ಬಗ್ಗೆ ತೀವ್ರಗೊಂಡ ಕುತೂಹಲ: ಬಿಜೆಪಿ ಹೈಕಮಾಂಡ್ ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮುಂದಾಗಿದೆ ಎಂಬ ಊಹಾಪೋಹಕ್ಕೆ ಪುಷ್ಠಿ ಸಿಗುತ್ತಿದ್ದಂತೆ ಯದುವೀರ್ ಅವರ ರಾಜಮನೆತನ ಬಗ್ಗೆ ಕೆಣಕುವ ರೀತಿಯಲ್ಲಿ ಪ್ರತಾಪ್ ಸಿಂಹ ಮಾತನಾಡಿದ್ದಾರೆ.ತಳಮಟ್ಟದಲ್ಲಿ ಅವರಿಗೆ ರಾಜಕೀಯ ಅನುಭವ ಏನಿದೆ, ತಳಮಟ್ಟದಲ್ಲಿ ಅವರು ಜನತೆಗೆ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ.

ನಿನ್ನೆ ಮಾಧ್ಯಮಗಳ ಮುಂದೆ ಮಾತನಾಡಿದ ಪ್ರತಾಪ್ ಸಿಂಹ, ರಾಜರು ಸಾಮಾನ್ಯ ಪ್ರಜೆಗಳಂತೆ ರಾಜಕೀಯಕ್ಕೆ ಬರುವುದಾದರೆ ನಾನು ಅವರನ್ನು ಖುಷಿಯಿಂದ ಸ್ವಾಗತಿಸುತ್ತೇನೆ, ಅರಮನೆಯಲ್ಲಿ ಎಸಿ ಕೋಣೆಯಲ್ಲಿದ್ದವರು ಅಲ್ಲಿಂದ ಹೊರಬಂದು ಜನರ ಮಧ್ಯೆ ಸಾಮಾನ್ಯರ ಜೊತೆ ಬೆರೆಯುವುದಾದರೆ ಅದನ್ನು ಖುಷಿಯಿಂದ ನಾವು ಸ್ವಾಗತಿಸಬಾರದೇಕೆ, ರಾಜಮನೆತನದ ಐಷಾರಾಮಿ ಜೀವನಶೈಲಿಯಿಂದ ಹೊರಬಂದು ಮುಖ್ಯಮಂತ್ರಿಗಳ ವಿರುದ್ಧ ಜನಪರ ವಿಷಯಗಳಿಗೆ ಪ್ರತಿಭಟನೆ ಮಾಡುವುದಾದರೆ, ಪಕ್ಷದ ಕಾರ್ಯಕರ್ತರ ಜೊತೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವುದು, ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಾದರೆ ಅಂತವರನ್ನು ನಾನು ಖಂಡಿತಾ ಬೆಂಬಲಿಸುತ್ತೇನೆ ಎಂದು ವ್ಯಂಗ್ಯಭರಿತ ಧಾಟಿಯಲ್ಲಿ ಮಾತನಾಡಿದ್ದಾರೆ.

ಪ್ರತಾಪ್ ಸಿಂಹ ಮಾತಿಗೆ ಅಪಸ್ವರ: ನೋವು, ಹತಾಶೆ, ಆತಂಕದಲ್ಲಿ ಪ್ರತಾಪ್ ಸಿಂಹ ಆಡಿರುವ ಮಾತುಗಳು ಬಿಜೆಪಿಯ ಕೆಲವು ನಾಯಕರಿಗೆ ಹಿಡಿಸಿಲ್ಲ. ಮೈಸೂರಿನವರೇ ಆದ ಮಾಜಿ ಶಾಸಕ ಮತ್ತು ನಗರ ಬಿಜೆಪಿ ಅಧ್ಯಕ್ಷ ಎಲ್ ನಾಗೇಂದ್ರ, ಒಡೆಯರ್ ರಾಜಮನೆತನದ ಬಗ್ಗೆ ಪ್ರತಾಪ್ ಸಿಂಹ ಅವರು ಹಗುರವಾಗಿ ಮಾತನಾಡಬಾರದು ಎಂದರೆ ಮತ್ತೊಬ್ಬ ಬಿಜೆಪಿ ನಾಯಕ ಜಯ ಪ್ರಕಾಶ ಅವರು ಪ್ರತಾಪ್ ಸಿಂಹ ಅವರ ಇತ್ತೀಚಿನ ನಡವಳಿಕೆ ಬಗ್ಗೆ ಟೀಕಿಸಿದ್ದಾರೆ.

ತಮ್ಮ ಮಾತು-ವರ್ತನೆಗಳನ್ನು ಪ್ರತಾಪ್ ಸಿಂಹ ಸಮರ್ಥಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎದುರಿಸುವ ಶಕ್ತಿ ಮೈಸೂರು ರಾಜಕಾರಣದಲ್ಲಿ ತಮಗೆ ಮಾತ್ರ ಇರುವುದು ಎಂದು ಹೇಳುತ್ತಿದ್ದಾರೆ. ಆದರೆ ಹೊಂದಾಣಿಕೆ ರಾಜಕೀಯ, ಪಕ್ಷದ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು ಕೆಲವೊಮ್ಮೆ ಪ್ರತಾಪ್ ಸಿಂಹ ನೀಡುತ್ತಿರುವ ಹೇಳಿಕೆಗಳು ಕೇಸರಿ ಪಡೆಯ ನಾಯಕರನ್ನು, ಸ್ಥಳೀಯ ನಾಯಕರಿಗೆ ಇರಿಸುಮುರುಸು ಉಂಟುಮಾಡುತ್ತಿದೆ.

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ ಹಾಗೆಯೇ ಉಳಿದುಕೊಂಡಿದ್ದು ಪಕ್ಷದೊಳಗೆ ಆತಂಕ ಗೊಂದಲ ಮನೆಮಾಡಿರುವುದಂತೂ ಸತ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com