ಬೆಂಗಳೂರು ಉತ್ತರ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಯಾರು? ಇಂದಿನ ಸಭೆಯಲ್ಲಿ ನಿರ್ಧಾರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಗೆಲ್ಲಲು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇಂದು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಗೆಲ್ಲಲು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇಂದು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಉತ್ತರ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಈ ಬಾರಿ ಪಕ್ಷದಲ್ಲಿ ಇವರಿಬ್ಬರಿಗೆ ಜವಾಬ್ದಾರಿ ವಹಿಸಲಾಗಿದೆ.

ಮಾಜಿ ಸಂಸದ ಪ್ರೊ.ರಾಜೇಗೌಡ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಣದಲ್ಲಿದ್ದು, ಇವರಿಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ನಾಯಕರ ತಂಡವೊಂದು ಬೆಳಗ್ಗೆ ಪ್ರಿಯಾ ಕೃಷ್ಣ ಅವರನ್ನು ಭೇಟಿ ಮಾಡಿ ಸ್ಪರ್ಧಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದು, ಅವರ ಪರ ಪೂರ್ಣಮನಸ್ಸಿನಿಂದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಬ್ಯಾಟರಾಯನಪುರದಲ್ಲಿ ಕೃಷ್ಣ ಬೈರೇಗೌಡ, ಪುಲಿಕೇಶಿ ನಗರದಲ್ಲಿ ಎಸಿ ಶ್ರೀನಿವಾಸ್ ಮತ್ತು ಹೆಬ್ಬಾಳದಲ್ಲಿ ಬೈರತಿ ಸುರೇಶ್, 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರ ಬೆಂಬಲದೊಂದಿಗೆ ಪಕ್ಷಕ್ಕೆ ಲಾಭವಿದೆ. ಕೆಲ ದಿನಗಳ ಹಿಂದಷ್ಟೇ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಮಶೇಖರ್ ಮತ ಚಲಾಯಿಸಿದರು. ಸೋಮಶೇಖರ್ ಕಾಂಗ್ರೆಸ್‌ಗೆ ರಹಸ್ಯವಾಗಿ ಅಥವಾ ಬಹಿರಂಗವಾಗಿ ಕೆಲಸ ಮಾಡಿದರೆ, ಅದು ಪಕ್ಷಕ್ಕೆ ದೊಡ್ಡ ಉತ್ತೇಜನ ಸಿಕ್ಕಿದಂತೆ ಆಗುತ್ತದೆ.

ಬಿಜೆಪಿಗೆ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಬೆಂಬಲವಿದ್ದು ಇವರು ಮಾಜಿ ಕಾಂಗ್ರೆಸ್ಸಿಗ. ಇನ್ನು ಮಹಾಲಕ್ಷ್ಮಿ ಶಾಸಕ ಕೆ ಗೋಪಾಲಯ್ಯ ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ್ದಾರೆ, ಜೊತೆಗೆ ಮಲ್ಲೇಶ್ವರಂ ಶಾಸಕ ಸಿಎನ್ ಅಶ್ವಥ್ ನಾರಾಯಣ್ ಮತ್ತು ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರು ಕೆಲಸ ಮಾಡಲಿದ್ದಾರೆ.

ಜಿಲ್ಲೆಯ ಹೊರಗಿನ ನಾಯಕರನ್ನು ಸೆಳೆಯುವುದು ಬಿಜೆಪಿಗೆ ಕಷ್ಟವಾಗಿದೆ. ಈ ಹಿಂದೆ ಬೆಂಗಳೂರು ಉತ್ತರಕ್ಕೆ ಚಿಕ್ಕಮಗಳೂರಿನಿಂದ ಡಿ.ಬಿ.ಚಂದ್ರೇಗೌಡ ಮತ್ತು ಉಡುಪಿ-ಚಿಕ್ಕಮಗಳೂರಿನಿಂದ ಮಾಜಿ ಸಿಎಂ ಸದಾನಂದಗೌಡರನ್ನು ಕರೆತಂದರು. ಅವರು ಇಲ್ಲಿನ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈಗ ದಕ್ಷಿಣ ಕನ್ನಡದವರಾಗಿರುವ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಿದ್ದಾರೆ.

28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ನಾವು ಚುನಾವಣಾ ಸಮಿತಿ ಸಭೆ ನಡೆಸಿ ಮಾರ್ಚ್ 18 ರಂದು ಸಭೆಯ ನಂತರ ಎಲ್ಲಾ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com