ಕರ್ನಾಟಕದಲ್ಲಿರುವುದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ‘‘ವೀಕ್ ಪಿಎಂ’’ ಅಲ್ಲ: ಮೋದಿಗೆ ಸಿದ್ದರಾಮಯ್ಯ ತಿರುಗೇಟು

ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ - ಪಿಎಂ ಮೋದಿ
ಸಿದ್ದರಾಮಯ್ಯ - ಪಿಎಂ ಮೋದಿ
Updated on

ಬೆಂಗಳೂರು: ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಕರ್ನಾಟಕದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ, ವೇಟಿಂಗ್ ಸಿಎಂ ಇದ್ದಾರೆ ಎಂದು ಸಿದ್ದರಾಮಯ್ಯ, ಮತ್ತು ಅವರ ಪುತ್ರ ಯತೀಂದ್ರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಉಲ್ಲೇಖಿಸಿ ಹೇಳಿದ್ದರು. ಇವರುಗಳ ಮಧ್ಯೆ ದೆಹಲಿಯಲ್ಲಿ ವಸೂಲಿ ಸಚಿವರಿದ್ದಾರೆ ಎಂದಿದ್ದರು.

ಇಂದು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಸನ್ಮಾನ್ಯ ಪ್ರಧಾನಿ ಮೋದಿ ಅವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ - ಪಿಎಂ ಮೋದಿ
ರಾಹುಲ್ ಗಾಂಧಿ 'ಶಕ್ತಿ' ಹೇಳಿಕೆ ವಿರುದ್ಧ ಪ್ರಧಾನಿ ವಾಗ್ದಾಳಿ; ರಾಜ್ಯದಲ್ಲಿ ಸೂಪರ್ ಸಿಎಂ ಗಳಿದ್ದಾರೆ- ಮೋದಿ ಟೀಕೆ

ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವರು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ‘‘ವೀಕ್ ಪಿಎಂ’’ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ. ಬಿ.ಎಸ್ ಯಡಿಯೂರಪ್ಪನವರು ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ‘‘ವೀಕ್ ಪಿಎಂ’’ ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ನಿಮ್ಮ ನಾಯಕತ್ವದ ವಿರುದ್ಧ ಅರ್ಧ ಡಜನ್ ನಾಯಕರು ಬಂಡೆದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ನಿಮ್ಮ ಪಕ್ಷದ ನಾಯಕರು ಹಾದಿ ಬೀದಿಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿಮ್ಮ ಯಾವ ಮನವಿಗೂ ಅವರು ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲವರು ನಮ್ಮನ್ನೂ ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತಹ ಅಶಿಸ್ತಿನ ತಾಂಡವ. ಇದಕ್ಕೆಲ್ಲ ಕಾರಣ ನೀವೊಬ್ಬ ‘‘ವೀಕ್ ಪಿಎಂ’’ ಆಗಿರುವುದಲ್ಲವೇ ಮೋದಿ ಅವರೇ?

ಶಿವಮೊಗ್ಗದಲ್ಲಿ ನೀವು ಪಕ್ಷದ ಪ್ರಚಾರ ಸಭೆ ನಡೆಸುತ್ತಿದ್ದಾಗ ಬಂಡಾಯ ನಾಯಕ ಈಶ್ವರಪ್ಪನವರು ಕೂಗಳತೆ ದೂರದ ತಮ್ಮ ಮನೆಯಲ್ಲಿದ್ದರೂ ಕ್ಯಾರೇ ಅನ್ನದೆ ಸಭೆಗೆ ಗೈರು ಹಾಜರಾಗಿದ್ದರು. ಇಷ್ಟು ಮಾತ್ರವಲ್ಲ ನಿರಂತರವಾಗಿ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ‘‘ವೀಕ್ ಪಿಎಂ’’ ಅಲ್ಲದೆ ಮತ್ತೇನು? ಎಂದಿದ್ದಾರೆ.

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ, ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದವರು ಹಲವು ಮಂದಿ ಇದ್ದಾರೆ. ನಿಮ್ಮ ಪಕ್ಷದ ಕತೆ ಏನು? ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿರುವ ನಿಮ್ಮ ಪಕ್ಷದಲ್ಲಿ ಪಿಎಂ ಆಗುವ ಅರ್ಹತೆ ಇರುವ ಒಬ್ಬ ನಾಯಕನೂ ಇಲ್ಲವಲ್ಲಾ..!! ಅಂತಹ ನಾಯಕರೇ ಇಲ್ವಾ? ಅಥವಾ ಕುರ್ಚಿ ಕಳೆದುಕೊಳ್ಳುವ ಭಯದಿಂದ ಅಂತಹ ನಾಯಕರನ್ನು ಬೆಳೆಯಲು ನೀವೇ ಬಿಡುತ್ತಿಲ್ವಾ

ಮೋದಿ ಅವರೇ? ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com