ಗಾಯತ್ರಿ ಸಿದ್ದೇಶ್ವರ್ - ಪ್ರಭಾ ಮಲ್ಲಿಕಾರ್ಜುನ್
ಗಾಯತ್ರಿ ಸಿದ್ದೇಶ್ವರ್ - ಪ್ರಭಾ ಮಲ್ಲಿಕಾರ್ಜುನ್

ಕೇಸರಿ ಭದ್ರಕೋಟೆ ದಾವಣಗೆರೆಯಲ್ಲಿ ಈ ಬಾರಿ ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ

1999 ರ ಲೋಕಸಭೆ ಚುನಾವಣೆಯ ನಂತರ, ದಾವಣಗೆರೆ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿದ್ದು, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದಿಂದ ಸೋಲಿಸಲು ಸಾಧ್ಯವಾಗಿಲ್ಲ.
Published on

ಬೆಂಗಳೂರು: 1999 ರ ಲೋಕಸಭೆ ಚುನಾವಣೆಯ ನಂತರ, ದಾವಣಗೆರೆ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿದ್ದು, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದಿಂದ ಸೋಲಿಸಲು ಸಾಧ್ಯವಾಗಿಲ್ಲ.

ಈ ಬಾರಿ ಕರ್ನಾಟಕದ ಮಧ್ಯ ಭಾಗದಲ್ಲಿರುವ ಬೆಣ್ಣೆ ನಗರಿಯಲ್ಲಿ ಪರಸ್ಪರ ಸಂಬಂಧಿಗಳೂ ಆಗಿರುವ ಎರಡು ಪ್ರಬಲ ಕುಟುಂಬಗಳ ಮಹಿಳಾ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಆರಂಭವಾಗಿದೆ.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಮತ್ತು ಕಾಂಗ್ರೆಸ್ ಹಿರಿಯ ಶಾಸಕ, 92 ವರ್ಷದ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿಸಲಾಗಿದೆ. ಅವರ ಪತಿ ಎಸ್.ಎಸ್.ಮಲ್ಲಿಕಾರ್ಜುನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದಾರೆ.

ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ದಾವಣಗೆರೆ ಕ್ಷೇತ್ರದಿಂದ ಸಿದ್ದೇಶ್ವರ್ ಅವರು 2004, 2009, 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ದಾವಣಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಸಿದ್ದೇಶ್ವರ್ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರು 1996 ಮತ್ತು 1999 ರ ಲೋಕಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಬಿಜೆಪಿಯ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್, ಹಿರಿಯ ಮುಖಂಡ ಮಾಡಾಳ್ ವಿರೂಪಾಕ್ಷಪ್ಪ ಅವರು ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಭ್ಯರ್ಥಿಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಜಿಲ್ಲೆಯ ಹಲವು ಪ್ರಮುಖ ಬಿಜೆಪಿ ನಾಯಕರು ಸಹ ಗಾಯತ್ರಿ ಸಿದ್ದೇಶ್ವರ್ ಅವರನ್ನು ವಿರೋಧಿಸುತ್ತಿದ್ದಾರೆ.

ಕಾಂಗ್ರೆಸ್ ಕೂಡ ಈ ಬಾರಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿದೆ.

ಗಾಯತ್ರಿ ಸಿದ್ದೇಶ್ವರ್ - ಪ್ರಭಾ ಮಲ್ಲಿಕಾರ್ಜುನ್
ಲೋಕಸಭೆ ಚುನಾವಣೆ: JDSಗೆ ಕೋಲಾರ ಸೇರಿ 3 ಕ್ಷೇತ್ರ; ಬಿಜೆಪಿ ಅಧಿಕೃತ ಘೋಷಣೆ

2019ರಲ್ಲಿ ಜಿ.ಎಂ. ಸಿದ್ದೇಶ್ವರ್ ಅವರು 1.69 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಕೇವಲ 17,607 ಮತಗಳಿಂದ ಗೆದ್ದಿದ್ದರು.

ಈ ಬಾರಿ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಅವರೇ ಕಣದಲ್ಲಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್ ದಂತ ವೈದ್ಯೆಯಾಗಿದ್ದು, ಎಸ್‌ಎಸ್ ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಮತ್ತು ಬಾಪೂಜಿ ಎಜುಕೇಷನಲ್ ಅಸೋಸಿಯೇಶನ್‌ನ ಆಡಳಿತ ಮಂಡಳಿಯ ಸದಸ್ಯೆ ಆಗಿದ್ದಾರೆ. ಅವರ ಪ್ರತಿಸ್ಪರ್ಧಿ ಗಾಯತ್ರಿ ಅವರು ಕೇವಲ ಪಿಯುಸಿ ಓದಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರವು ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಮಾಯಕೊಂಡ, ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಹರಿಹರ ವಿಧಾನಸಭಾ ಕ್ಷೇತ್ರ ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿಯ ಆಂತರಿಕ ಭಿನ್ನಮತ, ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com