ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗಿಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ: ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್
ಮೈಸೂರು: ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ತಪ್ಪಿರುವ ಬಗ್ಗೆ ಇನ್ನೂ ಜನರಲ್ಲಿ ಚರ್ಚೆಗಳು ನಡೆಯುತ್ತಿದ್ದು ಕಾರಣ ನಿಗೂಢವಾಗಿದೆ. ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿರುವ ಬಗ್ಗೆ ಇಂದು ಮೈಸೂರಿನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ಪ್ರತಿಕ್ರಿಯೆ ನೀಡಿ, ಪ್ರತಾಪ್‌ಸಿಂಹಗೆ ಟಿಕೆಟ್ ತಪ್ಪಿದ್ದಕ್ಕೆ ನಿರ್ದಿಷ್ಟವಾದ ಕಾರಣ ಏನೂ ಇಲ್ಲ. ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗಿಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಎಂದು ಹೇಳಿದರು.
ನಮಗೆ ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗಿಂತಲೂ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಯದುವಂಶ ಸೇವೆ ಇಡೀ ದೇಶಕ್ಕೆ ಗೊತ್ತಿದೆ. ಈಗ ಅವರು ಪ್ರಜಾಪ್ರಭುತ್ವದ ಭಾಗ ಆಗಲು ಚುನಾವಣೆಗೆ ಬಂದಿದ್ದಾರೆ. ಇವರಿಂಗಿತಲೂ ಉತ್ತಮ ಅಭ್ಯರ್ಥಿ ಬೇಕಾ. ಯದುವೀರ್ ನಮ್ಮ ಸ್ಟಾರ್ ಕ್ಯಾಂಪೇನರ್. ಅವರನ್ನು ಎಲ್ಲಾ ಕಡೆಗಳಲ್ಲಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಪ್ರತಾಪ್ ಸಿಂಹಗಿಂತ ಯದುವೀರ್ ಒಳ್ಳೆಯ ಅಭ್ಯರ್ಥಿ ಎನ್ನುವ ಅರ್ಥದಲ್ಲಿ ಹೇಳಿದರು.
ಪ್ರತಾಪ್ ಸಿಂಹ ಕೂಡ ನಮ್ಮ ಸ್ಟಾರ್ ಪ್ರಚಾರಕ. ಅದಕ್ಕಿಂತಲೂ ಅವರ ಬಗ್ಗೆ ಇನ್ನೇನೂ ಹೇಳಬೇಕು. ಪ್ರತಾಪ್ ಸಿಂಹಗೆ ಸ್ಟಾರ್ ಪ್ರಚಾರಕ ಸ್ಥಾನವೇ ಕೊಟ್ಟಿದ್ದೇವೆ. ಇದ್ದಕ್ಕಿಂತ ಇನ್ನೇನು ಬೇಕು ಹೇಳಿ. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದಕ್ಕೆ ನಿರ್ಧಿಷ್ಟವಾದ ಕಾರಣ ಏನು ಇಲ್ಲ ಎಂದರು.
ಇನ್ನು ರಾಜ್ಯ ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬಂಡಾಯ ಇಲ್ಲ. ಕೆ.ಎಸ್.ಈಶ್ವರಪ್ಪ ನಮ್ಮ ಪಕ್ಷದ ದೊಡ್ಡ ನಾಯಕ. ಈಶ್ವರಪ್ಪ ಪ್ರಚಾರ ಶುರು ಮಾಡಿದ್ದಾರೆ. ಪ್ರಚಾರ ಮಾಡಲಿ ಬಿಡಿ, ಎಲ್ಲ ಸಮಸ್ಯೆ ಬಗೆಹರಿಯುತ್ತೆ. ಸಂಸದೆ ಸುಮಲತಾ ಅವರು ನಮ್ಮ ಪಕ್ಷದ ಬೆಂಬಲಿಗರು. ಸುಮಲತಾ ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ