ರಾಜೀನಾಮೆ ಪತ್ರ ತೋರಿಸಿ MLC ಗಳ ಹೈಡ್ರಾಮಾ; ಸ್ವೀಕರಿಸಲಿಲ್ಲ ಎಂದ ಬಸವರಾಜ ಹೊರಟ್ಟಿ!

ಕೋಲಾರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಸಚಿವ ಕೆ ಹೆಚ್ ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕ ಪೆದ್ದಣ್ಣ ಅವರಿಗೆ ನೀಡಲು ಪಕ್ಷ ನಿರ್ಧಾರ ಮಾಡಿರುವ ಬೆನ್ನಲ್ಲೇ ಅದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಲು ಮುಂದಾದರು.
ಸಭಾಪತಿ ಬಸವರಾಜ ಹೊರಟ್ಟಿ(ಸಂಗ್ರಹ ಚಿತ್ರ)
ಸಭಾಪತಿ ಬಸವರಾಜ ಹೊರಟ್ಟಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಕೋಲಾರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಸಚಿವ ಕೆ ಹೆಚ್ ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕ ಪೆದ್ದಣ್ಣ ಅವರಿಗೆ ನೀಡಲು ಪಕ್ಷ ನಿರ್ಧಾರ ಮಾಡಿರುವ ಬೆನ್ನಲ್ಲೇ ಅದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಲು ಮುಂದಾದರು.

ಅಷ್ಟೇ ಅಲ್ಲದೆ ಇಂದು ಮಧ್ಯಾಹ್ನ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಗೆ ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ನಜೀರ್ ಅಹ್ಮದ್ ಮತ್ತು ಅನಿಲ್ ಅವರು ರಾಜೀನಾಮೆ ಪತ್ರದೊಂದಿಗೆ ಬಸವರಾಜ ಹೊರಟ್ಟಿಯವರ ಮುಂದೆ ಬಂದು ಕುಳಿತು ಕ್ಯಾಮರಾ ಮುಂದೆ ಪ್ರದರ್ಶಿಸಿದರು.

ಕೋಲಾರ ಬಣ ರಾಜಕೀಯ ತಡೆಯುವಲ್ಲಿ ಸಿಎಂ, ಡಿಸಿಎಂ ವಿಫಲರಾಗಿದ್ದಾರೆ. ಕೋಲಾರ ನಾಯಕರ ಪ್ರತಿಷ್ಠೆ ಮುಂದೆ ಸ್ವತಃ ಸಿಎಂ, ಡಿಸಿಎಂ ಫೇಲ್ ಆಗಿದ್ದಾರೆ. ಸಿಎಂ ಅತ್ಯಾಪ್ತರಾಗಿರುವ ಬಹುತೇಕ ಶಾಸಕರು ರಾಜೀನಾಮೆ ನೀಡುತ್ತೇವೆ ಎಂದಿದ್ದಾರೆ.

ಈ ವೇಳೆ ಸಿಎಂ ಮತ್ತು ಡಿಸಿಎಂ ಅವರಿಗೆ ಕರೆ ಬಂದು ಸಾಯಂಕಾಲ ಬೆಂಗಳೂರಿಗೆ ಬಂದು ಮಾತನಾಡುತ್ತೇವೆ, ಯಾವುದಕ್ಕೂ ದುಡುಕು ನಿರ್ಧಾರ ಕೈಗೊಳ್ಳಬೇಡಿ ಎಂದರು. ಸಚಿವ ಭೈರತಿ ಸುರೇಶ್ ಸಭಾಪತಿಗಳ ಕೊಠಡಿಗೆ ಬಂದು ರಾಜೀನಾಮೆ ನೀಡದಂತೆ ತಡೆದು ಮನವೊಲಿಸಿದರು. ಈ ಹೈಡ್ರಾಮಾದ ಮಧ್ಯೆ ತಾವು ರಾಜೀನಾಮೆ ಪತ್ರ ಸ್ವೀಕರಿಸುವುದಿಲ್ಲ, ಹಾಗೆ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ(ಸಂಗ್ರಹ ಚಿತ್ರ)
ಕೋಲಾರ: ಮುನಿಯಪ್ಪ ಅಳಿಯನಿಗೆ ಕಾಂಗ್ರೆಸ್ ಟಿಕೆಟ್? ಸಚಿವ ಸುಧಾಕರ್ ಸೇರಿ ಆರು ಶಾಸಕರ ವಿರೋಧ, ರಾಜೀನಾಮೆ ಬೆದರಿಕೆ!

ಸಭಾಪತಿಗಳು ಹೇಳಿದ್ದೇನು?: ಕೋಲಾರ ಎಂ ಎಲ್ಸಿ ಗಳು ಮತ್ತು ಶಾಸಕರು ರಾಜೀನಾಮೆ ನೀಡುವುದಾಗಿ ದೂರವಾಣಿ ಮೂಲಕ ಕರೆ ಮಾಡಿ ಹೇಳಿ ಬೆಳಗ್ಗೆ 11.30ರೊಳಗೆ ಬನ್ನಿ ಎಂದು ಸಮಯ ನೀಡಿದ್ದೆ. ಅಷ್ಟರೊಳಗೆ ಬಂದಿಲ್ಲ. ಮಧ್ಯಾಹ್ನ ಹೊತ್ತಿಗೆ ಬಿಳಿ ಕಾಗದದಲ್ಲಿ ಬರೆದು ತಂದಿದ್ದರು. ಇದನ್ನು ತೆಗೆದುಕೊಳ್ಳಲು ಬರುವುದಿಲ್ಲ, ಲೆಟರ್ ಹೆಡ್ ಲ್ಲಿ ಅಧಿಕೃತವಾಗಿ ಬರೆದುಕೊಡಿ ತೆಗೆದುಕೊಳ್ಳುತ್ತೇನೆ ಎಂದೆ. ಅವರು ಕೊಡಲಿಲ್ಲ, ನಾನು ಹಾಗಾಗಿ ರಾಜೀನಾಮೆ ಸ್ವೀಕರಿಸಲಿಲ್ಲ ಎಂದು ಸಭಾಪತಿ ಹೊರಟ್ಟಿ ಸ್ಪಷ್ಟಪಡಿಸಿದರು.

ದೆಹಲಿ ಪ್ರಯಾಣ ಕ್ಯಾನ್ಸಲ್: ಎಂಎಲ್ಸಿ ಗಳು, ಶಾಸಕರು ಈಗ ತಮ್ಮ ರಾಜೀನಾಮೆ ನಿರ್ಧಾರವನ್ನು ಸಡಿಲಿಸಿ ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ಅವರ ದೆಹಲಿ ಪ್ರಯಾಣಕ್ಕೆ ಮಾಡಲಾಗಿದ್ದ ಟಿಕೆಟ್ ಬುಕ್ ನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ರಾಜಕೀಯ ಹೈಡ್ರಾಮಾಕ್ಕೆ ತೆರೆಬಿದ್ದಿದೆ.

ಕೋಲಾರ ಭಿನ್ನಮತದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್​ಗೆ ಮಾಹಿತಿ: ಕೋಲಾರ ಭಿನ್ನಮತದ ಬಗ್ಗೆ ರಾಜ್ಯ ಕಾಂಗ್ರೆಸ್​ ನಾಯಕರು ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಗೆ ಸಚಿವರು, ಶಾಸಕರು, ಎಂಎಲ್​ಸಿಗಳ ರಾಜೀನಾಮೆ ಕುರಿತು ಮಾಹಿತಿ ರವಾನಿಸಲಾಗಿದ್ದು ರಾಜೀನಾಮೆ ನೀಡದಂತೆ ತಡೆಯಲು ಸುರ್ಜೇವಾಲ ಸೂಚಿಸಿದ್ದಾರೆ. ನಜೀರ್ ಮನವೊಲಿಕೆ ಮಾಡುವಲ್ಲಿ ಭೈರತಿ ಸುರೇಶ್, ಶಾಸಕ ಪ್ರದೀಪ್ ಈಶ್ವರ್ ಕೊನೆಕ್ಷಣದಲ್ಲಿ ಯಶಸ್ವಿಯಾಗಿದ್ದಾರೆ.

ಬಿಕ್ಕಟ್ಟು ಇರುವುದು ನಿಜ ಎಂದ ಸಿಎಂ ಸಿದ್ದರಾಮಯ್ಯ: ಕೋಲಾರ ಬಿಕ್ಕಟ್ಟಿನ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಸಮಾಧಾನ ಇರುವುದು ನಿಜ. ಎಡಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯವಿದೆ. ಕೋಲಾರ ಜಿಲ್ಲೆಯ ಕೈ ನಾಯಕರ ಜೊತೆ ಮಾತಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಎಂ ಎಲ್ಸ್ ನಜೀರ್ ಅಹ್ಮದ್, ಸಾಯಂಕಾಲ ಸಿಎಂ ಮತ್ತು ಡಿಸಿಎಂ ಬರುತ್ತಾರೆ, ಅವರ ಜೊತೆ ಮಾತನಾಡಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮುನಿಯಪ್ಪ ಅವರು ಹೆಗಲಲ್ಲಿ ಪುಟಗೋಸಿ ಚೀಲ ಏರಿಸಿಕೊಂಡು 90ರ ದಶಕದಲ್ಲಿ ನನ್ನ ಹಿಂದೆ ಬರುತ್ತಿದ್ದ. ಆಗ ನಾನು ಸಚಿವನಾಗಿದ್ದೆ, ಅವನಿಗೆ ಟಿಕೆಟ್ ಕೊಡಿಸಿ ರಾಜಕೀಯ ಜೀವನ ಕೊಡಿಸಿದ್ದು ನಾನು, ರಾಜೀನಾಮೆ ನೀಡುವುದು ಬಿಡುವುದು ನನ್ನ ಮೂಲಭೂತ ಹಕ್ಕು ಎಂದು ಆಕ್ರೋಶ ಹೊರಹಾಕಿದರು.

ಸಚಿವ ಡಾ ಎಂ ಸಿ ಸುಧಾಕರ್ ಕೂಡ ಕೆ ಹೆಚ್ ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ನೀಡಲು ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com