ಸಂಸದೆ ಸುಮಲತಾ ತಾಳ್ಮೆಯಿಂದಿದ್ದರೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿದೆ: ಬಿ.ಎಸ್ ಯಡಿಯೂರಪ್ಪ

ಮಂಡ್ಯದಿಂದ ಕುಮಾರಸ್ವಾಮಿಗೆ ಟಿಕೆಟ್‌ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯಿದೆ.
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ

ಬೆಳಗಾವಿ: ಮಂಡ್ಯದಿಂದ ಕುಮಾರಸ್ವಾಮಿಗೆ ಟಿಕೆಟ್‌ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ, ಆದರೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯನ್ನು ಹೈಕಮಾಂಡ್‌ ಕೊಟ್ಟಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸುವ ಸಂಬಂಧ ಸಭೆ ಮಾಡಿದ್ದೇವೆ. ಎಲ್ಲರೂ ಸೇರಿ ಶೆಟ್ಟರ್ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ರಾಜ್ಯದ 28ಕ್ಷೇತ್ರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆಲ್ಲುತ್ತದೆ. ಎಲ್ಲಿಯೂ ಅಸಮಾಧಾನ ಆತಂಕ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪ್ರಚಾರಕ್ಕಾಗಿ ಎಲ್ಲಾ ಸ್ಥಳಗಳಿಗೆ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಜಗದೀಶ್ ಶೆಟ್ಟರ್ ಅವರು ತುಂಬಾ ಒಳ್ಳೆಯ ನಾಯಕರಾಗಿದ್ದರಿಂದ ಅವರನ್ನು ನಾವು ಒತ್ತಾಯಿಸಿ ವಾಪಸ್ ಬಿಜೆಪಿಗೆ ಕರೆಸಿಕೊಂಡಿದ್ದೇವೆ. ಇದೀಗ ಅವರು ತುಂಬಾ ಉತ್ಸಕತೆಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಎಸ್. ಯಡಿಯೂರಪ್ಪ
ಯಡಿಯೂರಪ್ಪ ಕುತ್ತಿಗೆ ಹಿಸುಕಿದ್ದಾರೋ, ಬೆಳೆಸಿದ್ದಾರೋ ಎಂಬುದು ಚುನಾವಣೆ ಬಳಿಕ ತಿಳಿಯಲಿದೆ: ವಿಜಯೇಂದ್ರ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರವನ್ನು ಟೀಕಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಪ್ರಧಾನಿಯನ್ನು ಟೀಕಿಸುವ ಮೊದಲು ಸಿಎಂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. 'ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡುವ ಮೂಲಕ ಸಿದ್ದರಾಮಯ್ಯ ಅವರು ದೊಡ್ಡ ನಾಯಕರಾಗುತ್ತಾರೆ ಎಂದು ಯೋಚಿಸುತ್ತಿರಬಹುದು. ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಹಣ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ ನಂತರವೂ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು.

ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಬೇಕು ಎಂಬ ಹೇಳಿಕೆ ನೀಡಿದ್ದ ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಎಸ್‌ ಯಡಿಯೂರಪ್ಪ ಕಿಡಿಕಾರಿದ್ದಾರೆ. ಸಚಿವ ಶಿವರಾಜ್ ತಂಗಡಗಿಗೆ ಈ ಹೇಳಿಕೆ ಶೋಭೆ ತರಲ್ಲ. ಇದು ಕಾಂಗ್ರೆಸ್ ಸಂಸ್ಕೃತಿಯೇ? ಇಡೀ ವಿಶ್ವವೇ ಪ್ರಧಾನಿ ಮೋದಿ ಅವರನ್ನು ಗೌರವದಿಂದ ನೋಡುತ್ತಿದೆ. ತಂಗಡಗಿ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com