
ಬೆಂಗಳೂರು: ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಆಗಿದೆ. ಎನ್ ಡಿಎ ಜೊತೆಗೆ ಮಾಡಿಕೊಂಡ ಚುನಾವಣಾ ಪೂರ್ವ ಮೈತ್ರಿಯಂತೆ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಹಾಸನದಿಂದ ಎಚ್.ಡಿ.ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರದಲ್ಲಿ ನಿರತರಾಗಿದ್ದರು. ಆದರೆ, ಮಂಡ್ಯದಲ್ಲಿ ಅಭ್ಯರ್ಥಿ ಯಾರು ಎಂಬುದು ಗೊಂದಲಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೆಸರು ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ನಡುವೆ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೇ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆಗೆ ಚನ್ನಪಟ್ಟಣ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಶುಕ್ರವಾರ ಅಧಿಕೃತವಾಗಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಮಂಡ್ಯದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಸುಮಲತಾ ಅವರೊಂದಿಗೆ ಕುಮಾರಸ್ವಾಮಿ ಸೌಹಾರ್ದತೆಯ ಹೆಜ್ಜೆಯನ್ನಿಟ್ಟಿದ್ದು, ಅವರ ಬೆಂಬಲ ಪಡೆಯಲು ಮುಂದಾಗಿದ್ದಾರೆ.
Advertisement