ಮಂಡ್ಯ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಅಖಾಡ ರಂಗೇರುತ್ತಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನನ್ನು ನಿಲ್ಲಿಸಿ ಸುಮಲತಾ ಎದುರು ಸೋಲು ಕಂಡಿದ್ದ ಕುಮಾರಸ್ವಾಮಿ, ಇದೀಗ ತಾವೇ ಕಣಕ್ಕೆ ಇಳಿಯುವ ಮೂಲಕ 'ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ' ತವಕದಲ್ಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸುಮಲತಾ ಹಾಗೂ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಟಿಕೆಟ್ ಹಾಲಿ ಸಂಸದೆ ಸುಮಲತಾ, ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೋ ಅಥವಾ ಪಕ್ಷೇತರವಾಗಿ ನಿಲ್ಲುತ್ತಾರೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಇಂದಿನ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಜಿಲ್ಲೆಯ ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ನರೇಂದ್ರ ಸ್ವಾಮಿ, ಸುಮಲತಾ ಅಂಬರೀಶ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಲ್ಲ, ಸುಮಲತಾ ಎಂದು ಅಂದಿನ ಮುಖ್ಯಮಂತ್ರಿಗೆ ಓಪನ್ ಆಗಿ ಹೇಳಿದ್ದೆ. ಅದೇ ರೀತಿ ಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ನೆರವಾಗಿದ್ದೇವೆ. ನಿಮ್ಮ ಚುನಾವಣೆಯಲ್ಲಿ ಸ್ವಾಭಿಮಾನದ ಬಗೆಗೆ ಮಾತಾಡಿದ್ದೀರಿ. ಈಗ ಸ್ವಾಭಿಮಾನ ಉಳಿಸೊ ಕೆಲಸ ಮಾಡಿ. ಮಳವಳ್ಳಿಯ ಹುಚ್ಚೆಗೌಡರ ಸೊಸೆ ಮಳವಳ್ಳಿಯ ಸ್ವಾಭಿಮಾನ ಕಳೆಯಬೇಡಿ, ಚುನಾವಣೆಗೆ ಯಾರ ಪರವಾಗಿ ಬರ್ತಿರೊ ಬರಲ್ವೊ ನನಗೆ ಚಿಂತೆ ಇಲ್ಲ. ಆಗ ಸ್ವಾಭಿಮಾನದ ಬಗೆಗೆ ಮಾತನಾಡಿರೊ ನೀವು ಈಗ ಸ್ವಾಭಿಮಾನ ಉಳಿಸೊ ಕೆಲಸ ಮಾಡಿ, ಈ ಚುನಾವಣೆಯಲ್ಲಿ ತಟಸ್ಥವಾಗಿರಿ ಅಥವಾ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ತಾಕೀತು ಮಾಡಿದರು.
Advertisement