ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಉಮೇದುವಾರಿಕೆ ಬದಲಾವಣೆ ವಿಚಾರ: ಗುಂಪುಗಾರಿಕೆಯಿಂದ ಲಿಂಗಾಯತ ಶ್ರೀಗಳು ದೂರ!

ಧಾರವಾಡ ಸಂಸತ್ ಕ್ಷೇತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅಭ್ಯರ್ಥಿಯಾಗಿರುವುದನ್ನು ವಿರೋಧಿಸಿ ಶಿರಹಟ್ಟಿ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದ ವೀರಶೈವ ಲಿಂಗಾಯತ ಮಠಾಧೀಶರ ನೇತೃತ್ವದ ಒಗ್ಗಟ್ಟು ಈಗ ಛಿದ್ರಗೊಂಡಿದೆ.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಧಾರವಾಡ ಸಂಸತ್ ಕ್ಷೇತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅಭ್ಯರ್ಥಿಯಾಗಿರುವುದನ್ನು ವಿರೋಧಿಸಿ ಶಿರಹಟ್ಟಿ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಒಂದಾಗಿದ್ದ ವೀರಶೈವ ಲಿಂಗಾಯತ ಮಠಾಧೀಶರುಗಳು ಈಗ ಬೇರೆಬೇರೆಯಾಗಿದ್ದಾರೆ. ಸಭೆಯ ಭಾಗವಾಗಿದ್ದ ಕೆಲವು ಸ್ವಾಮೀಜಿಗಳು ಈಗ ತಮ್ಮ ಹೇಳಿಕೆಗಳನ್ನು ಹಿಂಪಡೆದು ತಮ್ಮ ಹಿಂದಿನ ನಿಲುವಿನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಈ ಭಾಗದ ವಿವಿಧ ಲಿಂಗಾಯತ ಮಠಾಧೀಶರು ಕಳೆದ ಬುಧವಾರ ಇಲ್ಲಿನ ಮೂರುಸಾವಿರ ಮಠದಲ್ಲಿ ಸಭೆ ನಡೆಸಿ ಪ್ರಹ್ಲಾದ್ ಜೋಶಿಯವರು ಧಾರ್ಮಿಕ ಮುಖಂಡರುಗಳಿಗೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕಾಗಿ ಜೋಶಿ ಅವರನ್ನು ಧಾರವಾಡದಿಂದ ಎತ್ತಂಗಡಿ ಮಾಡಿ ಧಾರವಾಡಕ್ಕೆ ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಬಿಜೆಪಿ ಕೇಂದ್ರ ನಾಯಕತ್ವವನ್ನು ಒತ್ತಾಯಿಸಲು ನಿರ್ಧರಿಸಿದ್ದರು. ಆದರೆ ಅದೇ ದಿನ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಜೋಶಿ ಅವರ ಉಮೇದುವಾರಿಕೆಯನ್ನು ಬದಲಾಯಿಸಲು ನಿರಾಕರಿಸಿದ್ದರು.

ಈ ಸಭೆ ನಡೆದು ಮರುದಿನ ಅಂದರೆ ಗುರುವಾರವೇ ಮಠಾಧೀಶರುಗಳ ಗುಂಪು ಬೇರೆಯಾಗತೊಡಗಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಸುದ್ದಿಗೋಷ್ಟಿ ವೇಳೆ ಉಪಸ್ಥಿತರಿದ್ದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರು ಬೇಡಿಕೆಯಿಂದ ವಿಮುಖರಾದರು.

ಪತ್ರಿಕಾ ಪ್ರಕಟಣೆಯಲ್ಲಿ ಅವರು, “ನಮ್ಮ ಮಠವು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ರಾಜಕೀಯ ವಿಷಯಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ತೆಗೆದುಕೊಳ್ಳುವ ನಿರ್ಧಾರಗಳಿಗೂ ಮಠಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ಹೇಳಿದರು. ಆದರೆ ಅವರು ರಾಜಕೀಯ ಪಕ್ಷದ ಒತ್ತಡದಿಂದ ಈ ಪತ್ರಿಕಾ ಹೇಳಿಕೆ ನೀಡಿದ್ದಾರೆ ಎಂದು ನಂತರ ವಿವಾದ ಹುಟ್ಟಿಕೊಂಡಿತು.

ಈ ಮಧ್ಯೆ, ಅತ್ಯಂತ ಪ್ರಭಾವಿ ಮೂರುಸಾವಿರ ಮಠದ ಮುಖ್ಯಸ್ಥರೂ ಜೋಶಿ ಅವರ ಉಮೇದುವಾರಿಕೆ ವಿರುದ್ಧ ತೆಗೆದುಕೊಂಡಿದ್ದ ನಿರ್ಣಯದಿಂದ ದೂರ ಸರಿದರು. ಪ್ರಹ್ಲಾದ್ ಜೋಶಿಯವರ ಉಮೇದುವಾರಿಕೆಯನ್ನು ತಾನು ಎಂದಿಗೂ ವಿರೋಧಿಸಿಲ್ಲ ಎಂದು ಹೇಳಿದರು. ಅಭ್ಯರ್ಥಿ ಆಯ್ಕೆ ರಾಜಕೀಯ ಪಕ್ಷದ ಪರಮಾಧಿಕಾರವಾಗಿದ್ದು, ನಿರ್ಧಾರವನ್ನು ಪಕ್ಷದ ನಾಯಕತ್ವಕ್ಕೆ ಬಿಡಲಾಗಿದೆ ಎಂದು ಹೇಳಿದರು.

ಪ್ರಹ್ಲಾದ್ ಜೋಶಿ
ಲೋಕಸಭೆ ಚುನಾವಣೆ 2024: ಪ್ರಹ್ಲಾದ್ ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು; ಸಾಧ್ಯವಿಲ್ಲ ಎಂದ BSY!

ಜೋಶಿ ಅವರು ಧಾರ್ಮಿಕ ಮುಖ್ಯಸ್ಥರನ್ನು ಅಗೌರವಿಸಿದ್ದಾರೆ ಎಂಬ ಆರೋಪವನ್ನು ಅವರು ನಿರಾಕರಿಸಿದರು, ಕೇಂದ್ರ ಸಚಿವರು ಯಾವಾಗಲೂ ತಮ್ಮನ್ನು ಗೌರವಿಸುತ್ತಾರೆ ಎಂದು ಹೇಳಿದರು. ಮಠವು ಯಾವಾಗಲೂ ರಾಜಕೀಯ ಟೀಕೆಗಳನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸುತ್ತದೆ ಎಂದರು.

ಇನ್ನು ಜೋಶಿ ಅವರನ್ನು ಸಮರ್ಥಿಸಿಕೊಂಡ ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ಮೂರುಸಾವಿರ ಮಠದ ವೇದಿಕೆಯನ್ನು ತಮ್ಮ ರಾಜಕೀಯ ಗುರಿ ಈಡೇರಿಸಿಕೊಳ್ಳಲು ಬಳಸಿಕೊಂಡಿದ್ದಕ್ಕಾಗಿ ದಿಂಗಾಲೇಶ್ವರ ಸ್ವಾಮೀಜಿ ಅವರ ವಿರುದ್ಧ ಛೀಮಾರಿ ಹಾಕಿದರು. ಜೋಶಿಯವರು ತಮ್ಮ ನಾಲ್ಕು ಬಾರಿಯ ಸಂಸದರ ಅವಧಿಯಲ್ಲಿ ಯಾವುದೇ ಸಮುದಾಯದ ವಿರುದ್ಧ ಪಕ್ಷಪಾತ ಮಾಡಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನಿಕಟವರ್ತಿಯಾಗಿರುವ ಜೋಶಿ ಅವರು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಉಮೇದುವಾರಿಕೆಯನ್ನು ಬದಲಾಯಿಸುವುದು ಅಪ್ರಸ್ತುತ ಎಂದರು.

ದಿಂಗಾಲೇಶ್ವರ ಸ್ವಾಮಿಗಳು ರಾಜಕೀಯದಲ್ಲಿ ತಮ್ಮ ಮೂಗು ತೂರಿಸುತ್ತಿದ್ದಾರೆ. ಜೋಶಿಯವರ ವಿರುದ್ದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದರು. ಅವರಿಗೆ ರಾಜಕೀಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆಯಿದ್ದರೆ ಮಠದಿಂದ ಧಾರ್ಮಿಕ ಕಾರ್ಯಗಳಿಂದ ದೂರವುಳಿಯಬೇಕು ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿರಾಕರಿಸಿದ್ದಾರೆ. ಅಲ್ಲದೆ, ಜೋಶಿ ಅವರನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲು ಬಿಜೆಪಿಗೆ ನೀಡಲಾಗಿದ್ದ ಗಡುವು ಇಂದು ಅಂತ್ಯಗೊಳ್ಳಲಿದ್ದು, ದಿಂಗಾಲೇಶ್ವರ ಸ್ವಾಮೀಜಿ ಮುಂದಿನ ಕ್ರಮದ ಕುರಿತು ಒಂದಷ್ಟು ಘೋಷಣೆ ಮಾಡುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com