ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ: ಮಾಜಿ MLC ಅರುಣ್ ಶಹಾಪೂರ ಆಕ್ಷೇಪ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ತನ್ನ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನು ಹಾಳುಗಡೆವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಆಕ್ಷೇಪಿಸಿದ್ದಾರೆ.
ಅರುಣ್ ಶಹಾಪೂರ
ಅರುಣ್ ಶಹಾಪೂರ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ತನ್ನ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನು ಹಾಳುಗಡೆವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ವ್ಯವಸ್ಥೆಯಡಿ ರಾಜ್ಯ ಪಠ್ಯಕ್ರಮದಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಸರಕಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. 1 ಕೋಟಿ ಮಕ್ಕಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

10ನೇ ತರಗತಿ ಪರೀಕ್ಷೆ ಬರೆದ 9 ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕದಲ್ಲಿದ್ದಾರೆ. ಕೆಎಸ್‍ಇಎಪಿ ಮೂಲಕ ಪರೀಕ್ಷೆ ನಡೆಸಿದ್ದಾರೆ. ಯಶಸ್ವಿ ಪರೀಕ್ಷೆ ನಡೆಸಿದ್ದಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಪರೀಕ್ಷೆ ನಡೆದಿದ್ದರೆ ಅದು ಮಧು ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂದು ಅವರು ವಿಷಾದದಿಂದ ತಿಳಿಸಿದರು. ದಿಕ್ಕು ದೆಸೆಯಿಲ್ಲದ ಶಿಕ್ಷಣವನ್ನು ನಿರ್ಮಿಸಿದ್ದಾರೆ ಎಂದು ಟೀಕಿಸಿದರು.

ಅರುಣ್ ಶಹಾಪೂರ
ಪರಿಷತ್ ಚುನಾವಣೆ ಮೇಲೆ ಜೆಡಿಎಸ್-ಬಿಜೆಪಿ ಮೈತ್ರಿ ಯಾವುದೇ ಪರಿಣಾಮ ಬೀರದು: ಸಿಎಂ ಸಿದ್ದರಾಮಯ್ಯ

ಸೂತ್ರದ ಗೊಂಬೆಯಾಗಿದ್ದ ಶಿಕ್ಷಣ ಸಚಿವರು: ಶಿಕ್ಷಣ, ಪಠ್ಯದ ವಿಚಾರ ಶಿಕ್ಷಣ ತಜ್ಞರ ಮಟ್ಟದಲ್ಲಿ, ಇಲಾಖೆ ಮಟ್ಟದಲ್ಲಿ ನಿರ್ಧಾರವಾಗುತ್ತಿತ್ತು. ಆದರೆ, ಕಳೆದ ವರ್ಷ ಅದು ಕ್ಯಾಬಿನೆಟ್‍ನಲ್ಲಿ ನಿರ್ಧಾರವಾಗಿದೆ. ಇವರು ಕನ್ನಡದ 10 ಪಾಠ, ಸಮಾಜ ವಿಜ್ಞಾನದ 10 ಪಾಠಗಳನ್ನು ತೆಗೆದುಹಾಕಿ ಮೊಟ್ಟ ಮೊದಲ ಬಾರಿಗೆ ರಾಜಕೀಯಕರಣಗೊಳಿಸುವ ಕಾರ್ಯಕ್ಕೆ ಈಗಿನ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕೈ ಹಾಕಿದ್ದರು. ಶಿಕ್ಷಣ ಸಚಿವರು ಸೂತ್ರದ ಗೊಂಬೆಯಾಗಿದ್ದರು ಎಂದು ಅರುಣ್ ಶಹಾಪೂರ ಅವರು ವಿವರಿಸಿದರು.

ಕಾಂಗ್ರೆಸ್ ಪಕ್ಷ ಇವತ್ತು ಇಡೀ ಕರ್ನಾಟಕದಲ್ಲಿ ಚುನಾವಣಾ ಚಾಣಕ್ಯರ ಕಪಿಮುಷ್ಟಿಗೆ ಸಿಲುಕಿದೆ. ಚುನಾವಣಾ ಚಾಣಕ್ಯರೇ ಕಾಂಗ್ರೆಸ್ಸಿನ ನೀತಿ ನಿರೂಪಿಸುತ್ತಿದ್ದಾರೆ. ಪಾಠಗಳು ಯಾವುದೇ ಶಾಲೆಯಲ್ಲಿ ಮಕ್ಕಳವರೆಗೆ ತಲುಪಲಿಲ್ಲ. ಎನ್‍ಇಪಿ ಜಾರಿ ಇಲ್ಲ ಎಂಬ ಗೊಂದಲಗಳಿಗೆ ಕೈಹಾಕಿದ್ದರು. ಕೊನೆಗೆ ಪರೀಕ್ಷೆಯು ಪ್ರಹಸನ ಎಂಬಂತೆ ನಡೆದಿದೆ ಎಂದು ತಿಳಿಸಿದರು.

ಈ ಪರೀಕ್ಷೆಗಳ ಬಗ್ಗೆ ಈಗಲೂ ದೃಢ ನಿಲುವನ್ನು ಈ ಸರಕಾರ ತೆಗೆದುಕೊಂಡಿಲ್ಲ. 10ನೇ ತರಗತಿ ಹಾಗೂ ಪಿಯುಸಿಗೆ 3 ಪರೀಕ್ಷೆ (10- 1,2,3), (ಪಿಯು- 1,2,3) ಮಾಡಲು ಹೊರಟವರು ಮಕ್ಕಳ, ಪಾಲಕರ ಒತ್ತಡ, ಗೊಂದಲವನ್ನು ಯೋಚಿಸಿಲ್ಲ. ಕ್ಯಾಮೆರಾ ಹಾಕಿ ಪರೀಕ್ಷೆ ಬರೆದ ಮಕ್ಕಳಿಗೆ ಗೊಂದಲ ಉಂಟಾಗಿದೆ. ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್, ವೆಬ್ ಕಾಸ್ಟಿಂಗ್ ಉಳ್ಳ 10ನೇ ಪರೀಕ್ಷೆ ಎಂದರೆ ಅದು ಯುಪಿಎಸ್‍ಸಿ ಪರೀಕ್ಷೆಗಿಂತ ದೊಡ್ಡದೇ ಎಂಬ ಪ್ರಶ್ನೆ ಮುಂದಿಟ್ಟರು. ಕೆಎಸ್‍ಇಇ ಮೂಲಕ ಉತ್ತೀರ್ಣ ಅಂಕವನ್ನು 35ರಿಂದ 25ಕ್ಕೆ ಇಳಿಸಿದ್ದಾರೆ. ಇದು ಶಿಕ್ಷಣ ಕ್ಷೇತ್ರ ಹಾಳು ಮಾಡಿದ ಈ ಸರಕಾರದ ಸಾಧನೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com