ಪ್ರಜ್ವಲ್ ರೇವಣ್ಣ ಪ್ರಕರಣ: ದೇವರಾಜೇಗೌಡ ಮಾನಸಿಕ ಅಸ್ವಸ್ಥ, ಅವರಿಗೆ ಚಿಕಿತ್ಸೆ ಕೊಡಿಸಬೇಕು- ಡಿಸಿಎಂ ಡಿಕೆಶಿ

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ದೇವರಾಜೇಗೌಡ ಒಬ್ಬ ಮಾನಸಿಕ ಅಸ್ವಸ್ಥ, ಅವರಿಗೆ ಎಸ್ಐಟಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಶನಿವಾರ ಹೇಳಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪೆನ್ ಡ್ರೈವ್‌ ಹಂಚಿಕೆಯಲ್ಲಿ ತಮ್ಮ ಪಾತ್ರ ತಳ್ಳಿಹಾಕಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ದೇವರಾಜೇಗೌಡ ಒಬ್ಬ ಮಾನಸಿಕ ಅಸ್ವಸ್ಥ, ಅವರಿಗೆ ಎಸ್ಐಟಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಶನಿವಾರ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ ಮತ್ತು ವಕೀಲ ಜಿ ದೇವರಾಜೇಗೌಡ ಅವರು, ಪೆನ್ ಡ್ರೈವ್‌ ಹಂಚಿಕೆಯಲ್ಲಿ ಶಿವಕುಮಾರ್ ಮತ್ತು ಇತರ ನಾಲ್ವರು ಸಚಿವರ ಕೈವಾಡವಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ "ಕೆಟ್ಟ ಹೆಸರು ತರಲು" ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಹೆಸರನ್ನು ಕೆಡಿಸಲು ಡಿಕೆ ಶಿವಕುಮಾರ್ ತಮಗೆ 100 ಕೋಟಿ ರೂ. ಆಫರ್ ನೀಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಗೌಡರು ಲೋಕಾಯುಕ್ತ ಅಥವಾ ಇನ್ನಾವುದೇ ಏಜೆನ್ಸಿಯ ಮುಂದೆ ಪ್ರಕರಣ ದಾಖಲಿಸಲಿ. ಅವರಿಗೆ ಮಾನಸಿಕವಾಗಿ ಕೆಲವು ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ. ಅವರು ಒಬ್ಬ ಮಾನಸಿಕ ಅಸ್ವಸ್ಥ. ಅವರಿಗೆ ಚಿಕಿತ್ಸೆ ಕೊಡಿಸುವ ಅಗತ್ಯ ಇದೆ. ಇಂತಹ ಆಧಾರ ರಹಿತ ಆರೋಪಗಳನ್ನು ಜೈಲಿನಲ್ಲಿರುವವರು ಹೇಗೆ ಮಾಡುತ್ತಾರೆ? ಎಂದು ತಿರುಗೇಟು ನೀಡಿದ್ದಾರೆ.

ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾನಸಿಕವಾಗಿ ಅಸ್ವಸ್ಥರಾಗಿರುವ ವ್ಯಕ್ತಿಯ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲು ಅಥವಾ ಮಾತನಾಡಲು ಬಯಸುವುದಿಲ್ಲ. ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡುತ್ತೇನೆ ಎಂದರು.

ಡಿ ಕೆ ಶಿವಕುಮಾರ್
Pendrive Gang: 4 ಸಚಿವರ ಹೆಸರು ಹೇಳಿದ JDS; ಡಿಕೆಶಿ 100 ಕೋಟಿ ರೂ. ಆಫರ್ ನೀಡಿದ್ದರು- Devaraje Gowda

ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದ ಶಿವಕುಮಾರ್, ವಿಶೇಷ ತನಿಖಾ ತಂಡ(ಎಸ್‌ಐಟಿ) ನಡೆಸುತ್ತಿರುವ ತನಿಖೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಹಾಸನದ ನ್ಯಾಯಾಲಯದಿಂದ ವಿಚಾರಣೆಗೆ ಕರೆದೊಯ್ಯುವಾಗ ಮಾಧ್ಯಮದವರೊಂದಿಗೆ ಮಾತನಾಡಿದ ದೇವರಾಜೇಗೌಡ, ಪೆನ್ ಡ್ರೈವ್ ಪ್ರಕರಣದ ಹಿಂದೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದು, ನಾಲ್ವರು ಸಚಿವರಾದ ಎನ್ ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಮತ್ತೊಬ್ಬ ಸಚಿವರ ತಂಡವನ್ನು ರಚಿಸಲಾಗಿದೆ. ಇದು ಬಿಜೆಪಿ, ಪ್ರಧಾನಿ ಮೋದಿ ಮತ್ತು ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಈ ಬಗ್ಗೆ ಕಾನೂನು ಕ್ರಮದ ಬಗ್ಗೆ ನಾವು ಚರ್ಚಿಸುತ್ತೇವೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮಾನಹಾನಿಗಾಗಿ ದೇವರಾಜೇಗೌಡರು ಈ ರೀತಿ ಆರೋಪ ಮಾಡಿದ್ದಾರೆ. ಅವರಿಗೆ 100 ಕೋಟಿ ರೂ. ಆಫರ್ ಇದ್ದಿದ್ದರೆ ಅಮಿತ್ ಶಾ (ಕೇಂದ್ರ ಗೃಹ ಸಚಿವ) ಬಳಿ ಹೇಳಿ ತನಿಖೆ ನಡೆಸಬೇಕಿತ್ತು. ಸಿಬಿಐ, ಇಡಿ ಅಥವಾ ಐಟಿ ದಾಳಿ ಮಾಡಬಹುದಿತ್ತು. ತನಗೆ(ಗೌಡ) 5 ಕೋಟಿ ರೂಪಾಯಿಯನ್ನು ಕ್ಲಬ್‌ನಲ್ಲಿ ಮುಂಗಡವಾಗಿ ಕಳುಹಿಸಲಾಗಿದೆ ಎಂದ ಅವರು, ಐಟಿ, ಇಡಿಗೆ ಏಕೆ ಮಾಹಿತಿ ನೀಡಲಿಲ್ಲ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲಿ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com