ಅತ್ಯಾಚಾರಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋ ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ಕುಮಾರಸ್ವಾಮಿ ಪ್ರಶ್ನೆ

ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ಮನುಷ್ಯರು ಹೇಳುವ ಮಾತೇ?ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ಮನುಷ್ಯರು ಹೇಳುವ ಮಾತೇ?ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ, ಹಿಂದೆ ನಾನೂ ವಕೀಲಿಕೆ ಮಾಡುತ್ತಿದ್ದೆ ಎಂದು ಪದೇಪದೆ ಹೇಳಬೇಡಿ. ನಿಮ್ಮ ವಕೀಲಿ ಜ್ಞಾನದ ಮೇಲೆ ಅಗೌರವ ಬರುವಂತೆ ಮಾತನಾಡಬೇಡಿ. ಎಷ್ಟೋ ಮಹಾನುಭಾವರು ಈ ವೃತ್ತಿಗೆ ಕಳಸಪ್ರಾಯರಾಗಿದ್ದಾರೆ. ದಯಮಾಡಿ ಅವರೆಲ್ಲರನ್ನು ಅಪಮಾನಿಸಬೇಡಿ ಎಂದು ಮುಖ್ಯಮಂತ್ರಿಯನ್ನು ಕೇಳಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಅತ್ಯಾಚಾರದ ವೀಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ" ಎನ್ನುವ ಆಣಿಮುತ್ತು ಉದುರಿಸಿದ್ದೀರಿ. ನಿಮ್ಮ ವಕೀಲಿಕೆಯ ಪಾಂಡಿತ್ಯದ ಬಗ್ಗೆ ಈ ನಿಮ್ಮ ಮಾತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಉಂಟು ಮಾಡಿದೆ. ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ಮನುಷ್ಯರು ಹೇಳುವ ಮಾತೇ ಇದು? ದಯಮಾಡಿ ನೀವು ಇನ್ನೆಂದೂ ನಾನು ವಕೀಲಿಕೆ ಮಾಡುತ್ತಿದ್ದೆ ಎನ್ನಬೇಡಿ ಎಂದು ಸಲಹೆ ನೀಡಿದ್ದಾರೆ.

ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
ನಮ್ಮ ಕುಟುಂಬದವರ ಮೊಬೈಲ್ ಫೋನ್ ಕದ್ದಾಲಿಕೆ; ಪ್ರಜ್ವಲ್ ರೇವಣ್ಣ SIT ಮುಂದೆ ಶರಣಾಗಲಿ: ಎಚ್.ಡಿ ಕುಮಾರಸ್ವಾಮಿ

ನಿಮ್ಮ ಪಕ್ಕದಲ್ಲಿ ಪೆನ್ ಡ್ರೈವ್ ಹಂಚಿಕೆದಾರ ಕೂತಿದ್ದಾರೆ. ಆ CD ಶಿವು ಚುನಾವಣಾ ಸ್ವಾರ್ಥಕ್ಕಾಗಿ ಹೆಣ್ಮಕ್ಕಳ ಮಾನವನ್ನು ಪೆನ್ ಡ್ರೈವುಗಳಿಗೆ ತುಂಬಿಸಿ ಹಾದಿಬೀದಿಯಲ್ಲಿ ಮಾರಿಕೊಂಡಿದ್ದು ನಿಮಗೆ ಗೊತ್ತಿಲ್ಲವೇ? ಸ್ವಯಂ ಘೋಷಿತ ಸಂವಿಧಾನ ತಜ್ಞ ಬಿರುದಾಂಕಿತರಾದ ನೀವು, ಇಂಥ ಮಾನದ್ರೋಹಿಯನ್ನು ಪಕ್ಕದಲ್ಲೇ ಕೂರಿಸಿಕೊಳ್ಳಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ? ಪ್ರಶ್ನೆ ಮಾಡಿಕೊಳ್ಳಿ. ಚಾಲಕ ಕಾರ್ತಿಕ್ ಗೌಡ ಆ ನೊಂದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಿದ್ದ ಮೊದಲ ಪೆನ್ ಡ್ರೈವನ್ನು ನಿಮಗೆ ತಂದು ಕೊಡಲಿಲ್ಲವೇ? ಎಂದು ನಿಮ್ಮ ಉಪ ಮುಖ್ಯಮಂತ್ರಿಯನ್ನು ಒಮ್ಮೆಯಾದರೂ ಕೇಳಿದ್ದೀರಾ ಎಂದು ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.

ಪ್ರಜ್ವಲ್ ರೇವಣ್ಣ ವಾಪಸ್ ಬಂದು SIT ಮುಂದೆ ಹಾಜರಾಗದಿದ್ದರೆ ಕುಟುಂಬದಿಂದ ಹೊರ ಹಾಕುತ್ತೇನೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಅವರ ಮಾತೇ ನಮ್ಮ ಕುಟುಂಬದ ಮಾತು. ಆದರೆ ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ. ವಿದೇಶಕ್ಕೆ ಕಳಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದಿದ್ದೀರಿ! ನಿಮ್ಮ ಆತ್ಮಸಾಕ್ಷಿ ಎನ್ನುವುದು ಅಸ್ತಿತ್ವದಲ್ಲಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಆರೋಪಿ; ಪ್ರಕರಣ ದುರ್ಬಲಗೊಳಿಸಲು ಕುಮಾರಸ್ವಾಮಿ ನಾಟಕ: ಸಿಎಂ ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ದೇವೇಗೌಡರಿಗೆ ಹೇಳಿಯೇ ವಿದೇಶಕ್ಕೆ ಹೋಗಿದ್ದಾನೆ ಎಂದು ಹೇಳಿದ್ದೀರಿ. ನಿಮಗೆ ಹೇಗೆ ಗೊತ್ತು? ನಿಮ್ಮ ಪಕ್ಷದಲ್ಲೇ ಕೂರುವ CD ಶಿವು ಮಾಡುತ್ತಿರುವ ಮಾನಗೇಡಿ ಕೃತ್ಯಗಳು ಗೊತ್ತಾಗೋದಿಲ್ಲ ನಿಮಗೆ!? ಆದರೆ, ದೇವೆಗೌಡರ ಮನೆಯಲ್ಲಿ ನಡೆಯೋದೆಲ್ಲ ನಿಮಗೆ ಗೊತ್ತಾಗುತ್ತದೆಯೇ!? ಅದು ಹೇಗೆ? ನನ್ನ ಮತ್ತು ದೇವೆಗೌಡರ ಮನೆಗೆ ಕಳ್ಳಕಿವಿ ಇಟ್ಟಿದ್ದೀರಿ ಎನ್ನುವ ನನ್ನ ಆರೋಪ ಸತ್ಯ ಎಂದ ಹಾಗಾಯಿತು.. ಅಲ್ಲವೇ? ಅಸತ್ಯ ಹೇಳುವ ಅಗತ್ಯ ನಮಗಿಲ್ಲ. ಅವನು ಕುಟುಂಬದ ಸಂಪರ್ಕದಲ್ಲಿ ಇಲ್ಲ. ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಆತನ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಆತನ ಮೇಲಿರುವ ಆರೋಪ ಸಾಬೀತಾದರೆ ಪಕ್ಷದಲ್ಲಿ ಆತನಿಗೆ ಸ್ಥಾನವಿಲ್ಲ ಎಂದಿದ್ದಾರೆ.

SIT ಹೆಸರಿನಲ್ಲಿ ಎಷ್ಟು ಸ್ಲೀಪರ್ ಸೆಲ್ ಗಳು ತನಿಖೆ ಮಾಡುತ್ತಿವೆ ಎಂದು ಬಿಚ್ಚಿಟ್ಟರೆ ನಿಮ್ಮ ಸರಕಾರ ಕಥೆ ಮುಗಿದೇ ಹೋಗುತ್ತದೆ. CD ಶಿವು ಆದೇಶದ ಮೇರೆಗೆ ಪೆನ್ ಡ್ರೈವ್ ಗಳನ್ನು ಹಂಚಿದ ಕಿರಾತಕರೆಲ್ಲ ದಿನ ಬೆಳಗಾದರೆ ಯಾರ ಮನೆಯಲ್ಲಿ ಪ್ರತ್ಯಕ್ಷರಾಗುತ್ತಾರೆ? ವಿಧಾನಸೌಧದಲ್ಲಿ ಯಾರ ಕಚೇರಿಯೊಳಕ್ಕೆ ನುಸುಳುತ್ತಾರೆ ಎನ್ನುವುದು ಇಂಟೆಲಿಜೆನ್ಸ್ ಅನ್ನು ಇಟ್ಟುಕೊಂಡಿರುವ ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ? ಎಂದಿರುವ ಕುಮಾರಸ್ವಾಮಿ, ದಿವಂಗತ ರಾಕೇಶ್ ಅವರನ್ನು Tomorrow Land ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅಲ್ಲಿ ಅವರ ಸಾವಿಗೆ ನೀವೇ ಕಾರಣರಾದಿರಿ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ? ದೇವೇಗೌಡರ ಬಗ್ಗೆ ನೀವು ಕೇಳಿದ್ದು ಕೂಡ ಹಾಗೆಯೇ ಅಲ್ಲವೇ ಮಾನ್ಯ ಮುಖ್ಯಮಂತ್ರಿಗಳೇ. ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com