
ಮೈಸೂರು: ಬುದ್ಧ ಹುಟ್ಟಿದ ನಾಡು ಭಾರತದಲ್ಲಿ, ವಿಜ್ಞಾನ ತಂತ್ರಜ್ಞಾನವು ಇಷ್ಟೊಂದು ಮುಂದುವರೆದ ಕಾಲದಲ್ಲಿ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರು ತಾನೊಬ್ಬ ದೇವದೂತ ಎಂದು ಬಹಿರಂಗವಾಗಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್. ಸಿ.ಮಹದೇವಪ್ಪ ಮತ್ತೆ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡಿದ್ದಾರೆ.
ಮೋದಿಯವರು ಅಧಿಕಾರಕ್ಕೆ ಬಂದ ಮೇಲೆಯೇ ವಸ್ತುಗಳ ಬೆಲೆ ದುಬಾರಿಯಾಗಿದೆ, ದೇಶದಲ್ಲಿ ಅನಾಹುತ ಸಂಭವಿಸಿದೆ ಎಂದು ಪಟ್ಟಿ ಮಾಡಿ ಟ್ವೀಟ್ ಮಾಡಿದ್ದಾರೆ.
ಜನರಿಗೆ ನಿರಂತರವಾಗಿ ಸಹಾಯ ಮಾಡಿ ಅವರಿಂದಲೇ ಭಗವಾನ್ ಎಂದು ಕರೆಸಿಕೊಂಡ ಗೌತಮ ಬುದ್ಧರೇ ತನ್ನನ್ನು ತಾನು ಎಲ್ಲರಂತೆಯೇ ಸಾಮಾನ್ಯ ಎಂದು ಹೇಳಿಕೊಂಡಿರುವಾಗ ಜನರ ಬದುಕಿಗೆ ಎಲ್ಲ ರೀತಿಯಲ್ಲೂ ತೊಂದರೆ ಉಂಟು ಮಾಡಿ, ಅಸಮಾನತೆಯ ಸಮಾಜದ ನಿರ್ಮಾಣದ ದಿಕ್ಕಿನೆಡೆ ಆಡಳಿತ ನಡೆಸಿರುವ ಮೋದಿಯವರು ತಮ್ಮನ್ನು ತಾವೇ ದೇವದೂತ ಎನ್ನುತ್ತಿರುವುದು ಮೂಢನಂಬಿಕೆಯ ಸಮಾಜದ ನಿರ್ಮಾಣದ ಸ್ಪಷ್ಟ ಹೆಜ್ಜೆ ಆಗಿದೆ ಎಂದು ಪ್ರಧಾನಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಗಳು ಜನಸಾಮಾನ್ಯರ ದೂತರೇ ಹೊರತು, ದೇವದೂತರಲ್ಲ ಎಂಬುದನ್ನು ಅಧಿಕಾರದ ಕೊನೆಯ ಹಂತದಲ್ಲಿರುವ ಪ್ರಧಾನಿಗಳು ಅರ್ಥ ಮಾಡಿಕೊಳ್ಳಬೇಕು. ಇನ್ನು ವಿದೇಶಕ್ಕೆ ಹೋದಾಗಲೆಲ್ಲಾ ತಾನು ಬುದ್ಧನ ನಾಡಿನಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಬುದ್ಧ ಹೇಳಿದ ವಿಚಾರಗಳನ್ನು ಓದಿ ತಿಳಿದುಕೊಳ್ಳಬೇಕು.
ಇಲ್ಲದೇ ಇದ್ದಾಗ ಇಂತಹದ್ದೇ ಅರ್ಥವಿಲ್ಲದ, ಮೂಢನಂಬಿಕೆಯ ಮಾತುಗಳನ್ನೇ ಜನರು ಕೇಳಬೇಕಾಗುತ್ತದೆ. ಸಮಾನತೆ , ಸಾಮರಸ್ಯ ಮತ್ತು ಸೌಹಾರ್ದತೆಯ ಶತ್ರುವಾದ ಮೂಢನಂಬಿಕೆಯ ಮಾತುಗಳು ಪ್ರಜಾಪ್ರಭುತ್ವದ ಶತ್ರುಗಳು ಎಂಬುದನ್ನು ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ನನಗೆ ಈಗಿರುವ ಸಾಮರ್ಥ್ಯ ಅದು ನನ್ನದಲ್ಲ, ಅದು ನನಗೆ ದೇವರು ಕೊಟ್ಟಿರುವ ಶಕ್ತಿ. ಹಾಗಾಗಿಯೇ, ನನಗೆ ದೇವರು ಶಕ್ತಿ, ಸ್ವಚ್ಚ ಹೃದಯ, ಸಾಮರ್ಥ್ಯವನ್ನು ನೀಡಿದ್ದಾನೆ. ನಾನು ಏನೂ ಅಲ್ಲ, ಆದರೆ ನಾನು ದೇವರ ದೂತ ಎಂದು ಪ್ರಧಾನಿ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದರು.
Advertisement