ಮಂಗಳೂರು: ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಚುನಾವಣೆ ಇದ್ದಾಗ ಮಾತ್ರ ಕಣ್ಣೀರು ಹಾಕುತ್ತಾರೆ. ಆದರೆ ಜನರು ಸಂಕಷ್ಟದಲ್ಲಿದ್ದಾಗ ಕಣ್ಮರೆಯಾಗಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಅಥವಾ ರಾಮನಗರದ ಜನ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರೂ ಜಿಲ್ಲೆಗೆ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಏಕೆ ಬರಲಿಲ್ಲ. ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ? ಕುಮಾರಸ್ವಾಮಿ ಅಲ್ಲಿನ ಯಾವ ಕೆರೆಗೆ ನೀರು ತುಂಬಿಸಿದ್ದಾರೆ? ಯೋಗೇಶ್ವರ್ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಿದ್ದಾರೆ ಎಂದರು.
ಶಾಸಕರಾಗಿದ್ದ ಬಿಜೆಪಿ ಜೊತೆಗೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದ ಕುಮಾರಸ್ವಾಮಿ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಿಲ್ಲ. ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣ ಪ್ರತಿನಿಧಿಸಿದ್ದರು. ಈಗಿನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ಅವರು ಮಂಡ್ಯ ಹಾಗೂ ರಾಮನಗರದಲ್ಲಿ ಸೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ನಿವಾಸಿಗಳ ಸಮಸ್ಯೆಗಳನ್ನು ನೇರವಾಗಿ ಪರಿಹರಿಸಲು ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ.ಪಂಚ ಗ್ಯಾರಂಟಿಗಳು ದೇಶಾದ್ಯಂತ ಮಾದರಿಯಾಗಿದೆ. ಚನ್ನಪಟ್ಟಣದ ಜನ ವಿದ್ಯಾವಂತರು, ಪ್ರಜ್ಞಾವಂತರು. ಅವರ ಸಮಸ್ಯೆ ಪರಿಹರಿಸಲು ಸರ್ಕಾರ ಅವರ ಮನೆ ಬಾಗಿಲಿಗೆ ಹೋಗಿದೆ. 22,000 ಕ್ಕೂ ಹೆಚ್ಚು ಮನವಿ ಬಂದಿದ್ದು, ನೂರಾರು ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ನಾಯಕತ್ವದ ಮೇಲೆ ನಂಬಿಕೆ ಕಳೆದುಕೊಂಡಿರುವ ಜೆಡಿಎಸ್‌ನ ಹಲವು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.
Advertisement