ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ದೇವೇಗೌಡ ಮತ ಯಾಚನೆ

ನಾನು ಶತಾಯುಷಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಜನರ ಆಶೀರ್ವಾದಿಂದ ನಾನು ಬದುಕುವುದು ಗ್ಯಾರಂಟಿ ಎಂದು ಅಪ್ಪ ಬರೆದುಕೊಟ್ಟಿದ್ದ ಜಾತಕದಲ್ಲಿ ಹೇಳಿದ್ದಾರೆ. ನನ್ನ ಮೊಮ್ಮಗ ಈ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸುತ್ತಾನೆ ಎಂಬುದನ್ನು ನೋಡುತ್ತೇನೆ.
HD Devegowda Election Campaign
ಪ್ರಚಾರ ಸಭೆಯಲ್ಲಿ ಹೆಚ್. ಡಿ. ದೇವೇಗೌಡ
Updated on

ಚನ್ನಪಟ್ಟಣ: ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಂಗಳವಾರ ಮತ ಯಾಚಿಸಿದರು.

ಅನಾರೋಗ್ಯದ ಸಮಸ್ಯೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹಳ ಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ 92 ವರ್ಷದ ದೇವೇಗೌಡ, ನಿಖಿಲ್ ಕುಮಾರ ಅವರನ್ನು ಭಾರಿ ಅಂತರದಿಂದ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು.

ಆಪ್ತ ಸಹಾಯಕರು ಹಾಗೂ ಗನ್ ಮ್ಯಾನ್ ಅವರೊಂದಿಗೆ ಇಂದು ವಿರೂಪಾಕ್ಷಿಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ಚೇರ್ ನಲ್ಲಿಯೇ ಕುಳಿತು ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ತೆರವಾದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆ ಗೊಂದವಿತ್ತು. ಏನೆಲ್ಲಾ ಆಯಿತು ಎಂಬುದರ ಬಗ್ಗೆ ಇತರ ನಾಯಕರು ಮಾತನಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಬಗ್ಗೆ ಮಾತನಾಡುವುದಿಲ್ಲ. ಇಗ್ಗಲೂರು ಅಣೆಕಟ್ಟೆಯಂತಹ ಚನ್ನಪಟ್ಟಣದ ಅಭಿವೃದ್ಧಿಗೆ ತಾವು ಮಾಡಿರುವ ಕೆಲಸಗಳ ಬಗ್ಗೆ ಹೇಳಲು ಹಲವಾರು ವಿಷಯಗಳಿವೆ."ಆದರೆ ಈಗ ಚರ್ಚಿಸುವ ಅಗತ್ಯವಿಲ್ಲ, ದಯವಿಟ್ಟು ನಿಖಿಲ್ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು.

'ನಾನು ಶತಾಯುಷಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಜನರ ಆಶೀರ್ವಾದಿಂದ ನಾನು ಬದುಕುವುದು ಗ್ಯಾರಂಟಿ ಎಂದು ಅಪ್ಪ ಬರೆದುಕೊಟ್ಟಿದ್ದ ಜಾತಕದಲ್ಲಿ ಹೇಳಿದ್ದಾರೆ. ನನ್ನ ಮೊಮ್ಮಗ ಈ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸುತ್ತಾನೆ ಎಂಬುದನ್ನು ನೋಡುತ್ತೇನೆ' ಎಂದು ಹೇಳಿದರು. ಯೋಗೇಶ್ವರ್ ಅವರನ್ನು ಜೆಡಿಎಸ್ ಟಿಕೆಟ್‌ನಲ್ಲಿ ಕಣಕ್ಕಿಳಿಸುವ ಯೋಜನೆ ಇತ್ತು. ಆದರೆ ಅವರು ತೋರಲಲ್ಲ. ಬದಲಿಗೆ ಬಿಜೆಪಿ ಅಭ್ಯರ್ಥಿಯಾಗಲು ಕುಮಾರಸ್ವಾಮಿ ಬೆಂಬಲಿಸಲು ಬಯಸಿದ್ದರು.ಆದರೆ ಅದು ಪಕ್ಷಕ್ಕೆ ಸ್ವೀಕಾರ್ಹವಾಗಿರಲಿಲ್ಲ ಎಂದರು.

ತಾವು 60 ವರ್ಷಗಳಿಂದ ರಾಜಕೀಯದಲ್ಲಿದ್ದು, ಈಗ ಇರುವಂತಹ ಕೆಟ್ಟ ರಾಜಕೀಯವನ್ನು ನಾನು ಹಿಂದೆಂದೂ ನೋಡಿಲ್ಲ. ಇಂತಹ ಕೆಟ್ಟ ರಾಜಕಾರಣ ರಾಜ್ಯದಲ್ಲಿ ಮುಂದುವರಿಯಬಾರದು ಎಂದು ಯುವಕರು, ತಾಯಂದಿರು ಮತ್ತು ಹಿರಿಯರನ್ನು ಪ್ರಾರ್ಥಿಸುತ್ತೇನೆ. ಇದನ್ನು ಅಸೂಯೆ, ದ್ವೇಷ ಅಥವಾ ಯಾವುದೇ ವೈಯಕ್ತಿಕ ದ್ವೇಷದಿಂದ ಹೇಳುತ್ತಿಲ್ಲ. ವಿರೋಧ ಪಕ್ಷದ ನಾಯಕರು ಮಾತನಾಡಿದಾಗ ಹೇಗೆ ಗೌರವಿಸಬೇಕು ಎಂದು ಅವರಿಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಪ್ರಚಾರಕ್ಕೆ ಕೊನೆಯ ದಿನವಾಗಿರುವ ನವೆಂಬರ್ 11ರವರೆಗೂ ಪ್ರಚಾರ ನಡೆಸುವುದಾಗಿ ಹೇಳಿದ ಗೌಡರು, ರಾಜ್ಯ ಎದುರಿಸುತ್ತಿರುವ ಜಲ ವಿವಾದದಲ್ಲೂ ಹೋರಾಟ ಮುಂದುವರೆಸುತ್ತೇನೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರುತ್ತೇನೆ. ಇನ್ನೂ ಒಂದೂವರೆ ವರ್ಷ ರಾಜ್ಯಸಭಾ ಸದಸ್ಯತ್ವ ಇತ್ತು. ಎನ್ ಡಿಎ ಸ್ನೇಹಿತರೊಂದಿಗೆ ಹೋರಾಟ ನಡೆಸುತ್ತೇನೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು.

ಆಂಬ್ಯುಲೆನ್ಸ್ ನೊಂದಿಗೆ ದೇವೇಗೌಡರ ಪ್ರಚಾರ ಮಾಡಬೇಕಾಗುತ್ತದೆ ಎಂಬ ಡಿಕೆ ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ಜನರ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ಬದುಕುತ್ತೇನೆ. ನನ್ನ ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಗುಡುಗಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com