ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಮತ್ತು ಎನ್ಡಿಎ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ. ಎಚ್ ಡಿ ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾಗಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಎನ್ಡಿಎ ಕಸರತ್ತು ನಡೆಸಿದೆ.
ಈ ಮಧ್ಯೆ ಮಾಜಿ ಸಂಸದ ಡಿಕೆ ಸುರೇಶ್ ಅವರು ಕುಮಾರಸ್ವಾಮಿಯವರ ಆಡಿಯೋ ಸಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಮತದಾರರ ಬಳಿ ಹೆಚ್ಚಾಗಿ ಹೋಗಬಾರದು. ಮತದಾನಕ್ಕೆ ಕೆಲ ದಿನ ಇರುವಾಗ ಹೋಗಿ ಪ್ರಚಾರ ಮಾಡಬೇಕು ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದ ಆಡಿಯೋ ಸಿಡಿಯೊಂದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಟೀಕಿಸಿದ್ದಾರೆ.
ಅಭಿವೃದ್ಧಿಗೆ ಜನ ಮತ ಹಾಕಲ್ಲ, ಎಂಟು ದಿನದ ಹಿಂದೆ ಜನರ ಬಳಿ ಹೋಗಬೇಕು. ಚುನಾವಣಾ ತಂತ್ರ ಮಾಡಬೇಕು ಎಂದು ಆಗಿನ ಸಿಎಂ ಆಗಿದ್ದ ಕುಮಾರಸ್ವಾಮಿ ಹೇಳಿದ್ದರು ಎಂದು ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.
ಈ ಆಡಿಯೋ ರಿಲೀಸ್ ಮಾಡಿರುವುದಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಡಿ ಆಡಿಯೋ, ವಿಡಿಯೋ ಬಿಡುವಂತ ಪರಿಣಿತರಿವರು. ಅವರನ್ನು ಹಿಡಿಯಲು ಆಗುತ್ತಾ? ಆಡಿಯೋ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು ಎಂದು ಸ್ಪಷ್ಟಪಡಿಸಿದರು.
ಇನ್ನು ಈ ಆಡಿಯೋವನ್ನು ಒಂದು ವಾರದಿಂದ ಕಟಿಂಗ್ ಮಾಡಿ ಹಂಚುತ್ತಿದ್ದಾರೆ. ಅದು ನನ್ನ ಹೇಳಿಕೆಯಲ್ಲ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದೆ ಎಂದು ಹೇಳಿರುವ ಕುಮಾರಸ್ವಾಮಿ, ನನ್ನ ಚುನಾವಣೆಯಲ್ಲಿ ಕಾರ್ಯಕರ್ತರೇ ಮತ ಕೇಳುತ್ತಾರೆ. ನಾನು ಆ ರೀತಿ ಮಾತನಾಡುವ ಅವಶ್ಯಕತೆ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದವರು ಇಂತವರಿಂದ ನಗಣ್ಯ ಆಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದೆ ಎಂದು ಹೇಳಿದರು.
Advertisement