ರಾಮನಗರ: ನನ್ನ ಕೊನೆಯುಸಿರೆಳೆಯುವ ಮುನ್ನ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಪ್ಪಿಗೆ ಕೊಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹೊಡಿಕೆ ಹೂಸಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿದ ದೇವೇಗೌಡರು, ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ತಮಿಳುನಾಡು ನಮ್ಮ ದಾರಿಗೆ ಅಡ್ಡಿಪಡಿಸಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ, ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವು ಬಾರಿ ನನ್ನ ಮನವಿಯನ್ನು ಅವರು ಆಲಿಸಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷರು ಆರು ತಿಂಗಳಿಂದ ನಾನೇ ಅಭ್ಯರ್ಥಿ ಅಂದ್ರು. 55 ವರ್ಷಗಳಿಂದ ಚನ್ನಪಟ್ಟಣದ ಜನರ ಸೇವೆ ಮಾಡುತ್ತಿದ್ದೇನೆ. ನಾನು ಕಡಿಮೆ ದರದಲ್ಲಿ ಪಡಿತರ ನೀಡಿದ್ದೇನೆ. ಅದನ್ನು ಸಿದ್ದರಾಮಯ್ಯ ಬಳಿ ನೀವು ಕೇಳಿ ಎಂದು ಜನರಿಗೆ ಹೇಳಿದ ದೇವೇಗೌಡ, ಚನ್ನಪಟ್ಟಣದ ಇಗ್ಗಲೂರು ಮಾತ್ರವಲ್ಲ, ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು ಕಟ್ಟಿದವರು ಯಾರು? ಎಂದು ಪ್ರಶ್ನಿಸಿದರು. ನಿಮ್ಮನ್ನು ನೋಡುತ್ತಿದ್ದರೆ 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ ಎಂದರು.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವ ಕುಮಾರ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇದು ಹಿಮಾಲಯ ಪರ್ವತ ಮತ್ತು ಇಲ್ಲಿನ ಸಣ್ಣ ಬೆಟ್ಟದ ನಡುವಿನ ಹೋಲಿಕೆಯಂತಾಗುತ್ತದೆ.ನಿಖಿಲ್ ಕುಮಾರಸ್ವಾಮಿ ಅವರನ್ನು ನಾನೇ ರಾಜ್ಯ ನಾಯಕನನ್ನಾಗಿ ಮಾಡುತ್ತೇನೆ. ನನ್ನ ತೋಟದಲ್ಲಿ ಕುಳಿತು ನಾನು ಅವರನ್ನು ಉತ್ತಮ ನಾಯಕನನ್ನಾಗಿ ಮಾಡುವ ಸಮಯ ಬರುತ್ತದೆ ಎಂದು ದೇವೇಗೌಡರು ಹೇಳಿದರು.
ನಟಿ ಮತ್ತು ಬಿಜೆಪಿಯ ಹಿರಿಯ ನಾಯಕಿ ತಾರಾ ಮಾತನಾಡಿ, “ಯಾರೊಬ್ಬರ ಕಣ್ಣೀರನ್ನು ಎಂದಿಗೂ ಅಪಹಾಸ್ಯ ಮಾಡಬಾರದು. ಒಳ್ಳೆಯ ಹೃದಯ ಇರುವವರಿಗೆ ಮಾತ್ರ ಕಣ್ಣೀರು ಬರುತ್ತದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಈ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಂಡು ನಿಖಿಲ್ ಕುಮಾರಸ್ವಾಮಿ ಅವರಿಗೂ ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
Advertisement