ಸಂಡೂರು: ಕರ್ನಾಟಕ ಸರ್ಕಾರ "ವಾದ ಕಿಯಾ, ಧೋಕಾ ದಿಯಾ"(ಭರವಸೆಗಳನ್ನು ನೀಡಿತು, ಆದರೆ ಈಡೇರಿಸದೆ ದ್ರೋಹ ಮಾಡಿದೆ) ಎಂದು ಮಹಾರಾಷ್ಟ್ರ ಬಿಜೆಪಿ ಸುಳ್ಳು ಜಾಹೀರಾತು ನೀಡಿ, ಜನರ ದಾರಿ ತಪ್ಪಿಸುತ್ತಿದೆ ಎಂದು ಗುರುವಾರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ವಾದ ದಿಯಾ, ಪೂರಾ ಕಿಯಾ"(ಭರವಸೆಗಳನ್ನು ನೀಡಿದೆ ಮತ್ತು ಈಡೇರಿಸಿದೆ) ಎಂದು ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಅವರ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(ಶಕ್ತಿ ಯೋಜನೆ) ಸೇರಿದಂತೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು "ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ" ಎಂದು ಹೇಳಿದರು.
ಬಿಜೆಪಿ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ, "ವಾದ ದಿಯಾ, ಪೂರಾ ಕಿಯಾ" ಎಂದು ತಿರುಗೇಟು ನೀಡಿದರು. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿವೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ, ಕಪ್ಪುಹಣ ವಾಪಸ್ ತರುವುದು, ಉದ್ಯೋಗ ಸೃಷ್ಟಿಯಂತಹ ಆಶ್ವಾಸನೆಗಳನ್ನು ಈಡೇರಿಸಿಲ್ಲ. ನಿಮ್ಮ ಅಚೇ ದಿನ್ ಎಲ್ಲಿದೆ ಎಂದು ಪ್ರಶ್ನಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ ಇತ್ತು. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ವ್ಯಂಗ್ಯವಾಡಿದರು.
Advertisement