ಬೆಂಗಳೂರು: ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ಚನ್ನಪಟ್ಟಣದ ಇಗ್ಗಲೂರು ಅಣೆಕಟ್ಟು ಉಪಚುನಾವಣೆಯ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಈ ಯೋಜನೆಯಿಂದ ಸುಮಾರು 100 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ, ಸಾವಿರಾರು ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯ ಮಾಡಿದೆ.
1234.4 ಮೀಟರ್ ಉದ್ದ 5.15 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಇಗ್ಗಲೂರು ಅಣೆಕಟ್ಟು 1996 ರಲ್ಲಿ ಉದ್ಘಾಟನೆಗೊಂಡಿತು. ಇದನ್ನು ಕಾವೇರಿಯ ಉಪನದಿಯಾದ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯದಿಂದ ಏತ ನೀರಾವರಿ ಯೋಜನೆಯಡಿ ತಾಲೂಕು ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು ರೈತರು ರಾಗಿ, ಭತ್ತ, ಕಬ್ಬು ಸಹ ಬೆಳೆಯುತ್ತಿದ್ದಾರೆ. ಈಗ ಎಲ್ಲ ಪಕ್ಷಗಳೂ ಈ ಯೋಜನೆಯ ಕ್ರೆಡಿಟ್ ಪಡೆಯಲು ಮುಂದಾಗಿವೆ. ಅಣೆಕಟ್ಟಿನ ಹೆಸರಿನಲ್ಲಿ ಮತದಾರರನ್ನು ಓಲೈಸಲು ಯತ್ನಿಸುತ್ತಿವೆ. ಚನ್ನಪಟ್ಟಣ ಉಪಚುನಾವಣೆಯು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಸಮರವಾಗಿದೆ . ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಟಿಕೆಟ್‌ನಲ್ಲಿ ಸಿಪಿ ಯೋಗೇಶ್ವರ ಸ್ಪರ್ಧಿಸಿದ್ದಾರೆ. ರಾಮನಗರ ಜಿಲ್ಲೆಯವರೇ ಆದ ಡಿಸಿಎಂ ಡಿಕೆ ಶಿವಕುಮಾರ್ ನಿಖಿಲ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಯೋಗೇಶ್ವರ ಅವರು ಐದು ಬಾರಿ ಶಾಸಕರಾಗಿದ್ದಾರೆ, 1999 (ಸ್ವತಂತ್ರ), 2004, 2008 (ಕಾಂಗ್ರೆಸ್), 2011 ರ ಉಪಚುನಾವಣೆ (ಬಿಜೆಪಿ) ಮತ್ತು 2013 (ಸಮಾಜವಾದಿ ಪಕ್ಷ) ದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇಗ್ಗಲೂರು ಅಣೆಕಟ್ಟಿನಿಂದ ಕೆರೆಗಳನ್ನು ತುಂಬಿಸುವುದ್ದಕ್ಕಾಗಿ ಚನ್ನಪಟ್ಟಣದ ‘ಭಗೀರಥ’ ಎಂದು ಯೋಗೇಶ್ವರ್ ಜನಪ್ರಿಯರಾಗಿದ್ದಾರೆ. ಇದನ್ನು ಯೋಗೇಶ್ವರ್ ಅವರು ತಮ್ಮ ಭಾಷಣಗಳಲ್ಲಿ ಆಗಾಗ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಒಂದೆರಡು ದಿನಗಳಿಂದ ಮೊಮ್ಮಗ ನಿಖಿಲ್ ಪರ ಪ್ರಚಾರ ನಡೆಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಯೋಗೇಶ್ವರ್ ಅವರನ್ನು ಲೇವಡಿ ಮಾಡಿದರು, ಆದರೆ ಇಗ್ಗಲೂರು ಅಣೆಕಟ್ಟು ಕಟ್ಟಿದ್ದು ನಾನೇ, ಅದಕ್ಕೆ ನಮ್ಮ ಸರ್ಕಾರ 150 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ವಾಸ್ತವವಾಗಿ, ನನ್ನ ಅಧಿಕಾರಾವಧಿಯಲ್ಲಿ ನಾನು ಅದನ್ನು ಉದ್ಘಾಟಿಸಿದ್ದೇನೆ ಮತ್ತು ಇಲ್ಲಿನ ಜನರು ಅದಕ್ಕೆ ಸಾಕ್ಷಿಯಾಗಿದ್ದಾರೆ. ಕೆರೆಗಳಿಗೆ ನೀರು ಬರುವಂತೆ ನೋಡಿಕೊಂಡಿದ್ದೇನೆ ಎಂದು ದೇವೇಗೌಡರು ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಮತದಾರರಿಗೆ ತಿಳಿಸಿದರು. ಇಗ್ಗಲೂರು ಅಣೆಕಟ್ಟನ್ನು ದೇವೇಗೌಡರ ಬ್ಯಾರೇಜ್ ಎಂದೂ ಕರೆಯುತ್ತಾರೆ. ಇದೇ ವೇಳೆ, 2011-2012ರ ಅವಧಿಯಲ್ಲಿ ಡಿವಿ ಸದಾನಂದಗೌಡ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಒಂದಷ್ಟು ಅನುದಾನ ಬಿಡುಗಡೆ ಮಾಡಿದ್ದರಿಂದ ಬಿಜೆಪಿಯೂ ಮನ್ನಣೆ ಪಡೆಯುತ್ತಿದೆ.
Advertisement