ರಾಮನಗರ: ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನು ಬೆಳೆಸುವುದಿಲ್ಲ. ಅವರು ರಾಜಕೀಯವಾಗಿ ಇನ್ನೊಬ್ಬರನ್ನು ಮುಗಿಸುವುದರಲ್ಲಿ ಮತ್ತು ದ್ವೇಷ ರಾಜಕಾರಣ ಮಾಡುವುದರಲ್ಲಿ ನಂಬರ್ 1 ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರಿನಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಸಿದ್ದರಾಮಯ್ಯನನ್ನು ನಾನು ಸಿಎಂ ಮಾಡಿದೆ ಅಂತ ಹೇಳುತ್ತಾರೆ. ಮಿಸ್ಟರ್ ದೇವೇಗೌಡ ನಿನ್ನನ್ನು ಸಿಎಂ ಮಾಡಿದ್ದು ಯಾರು? ನಾನು ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದರು.
ಅಳೋದು ನಮ್ಮ ಪರಂಪರೆ, ವಂಶಪಾರಂಪರ್ಯ ಅಂತಾರೆ, ಪಾಪ ಆ ನಿಖಿಲ್ ಗೂ ಅಳೋದನ್ನು ಕಲಿಸಿಬಿಟ್ಟಿದ್ದಾರೆ. ಹಾಸನದಲ್ಲಿ ನೀವು ಅಳಬೇಕು. ಅಲ್ಲಿ ಹೋಗಿ ದೇವೇಗೌಡ, ಕುಮಾರಸ್ವಾಮಿ ಅಳಬೇಕು. ಆದರೆ ಪಾಪ ಆ ಹೆಣ್ಣುಮಕ್ಕಳು ಅಳುತ್ತಿದ್ದಾರೆ. ದಯವಿಟ್ಟು ನೀವು ಯಾರೂ ಅವರ ಕಣ್ಣೀರಿಗೆ ಮರುಳಾಗಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಕ್ಕೆ ಅವರಿಗೆ ಹೊಟ್ಟೆ ಉರಿ. ದೇವೇಗೌಡರೇ ನಿಮ್ಮ ಹೊಟ್ಟೆ ಉರಿ ನಿಮ್ಮನ್ನೇ ಸುಡುತ್ತದೆ ಎಂದು ಸಿದ್ದರಾಮಯ್ಯ, ಮಾಜಿ ಪ್ರಧಾನಿ ವಿರುದ್ಧ ಕಿಡಿ ಕಾರಿದರು.
Advertisement