ಮಂಡ್ಯ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ಕರೆದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ. ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆ ವೇಳೆ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಮಾತಿನ ಭರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತನಾಡಿದ್ದು ಇದು ರಾಷ್ಟ್ರಮಟ್ಟದಲ್ಲಿ ವಿವಾದ ಹುಟ್ಟುಹಾಕಿದೆ. ಹೆಚ್‌ಡಿ ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆಯುವ ಮೂಲಕ ಜಮೀರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ ಗಣಿಗ ರವಿಕುಮಾರ್ ಜಮೀರ್ ಈ ರೀತಿ ಹೇಳಿರುವುದು ಅವರ ಘನತೆಗೆ ಶೋಭೆ ತರಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಅವರ ಬಣ್ಣದ ಕುರಿತು ಜಮೀರ್ ಮಾತನಾಡಿರೋದು ದೊಡ್ಡ ತಪ್ಪು ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ. ಯಾರೇ ಆಗಲಿ ಯಾವುದೇ ವ್ಯಕ್ತಿಯನ್ನು ಅವರ ಬಣ್ಣದಿಂದ ಹೀಯಾಳಿಸಬಾರದು. ಕರಿಯಣ್ಣ, ಕುಳ್ಳಣ್ಣ ಅಂತ ವೈಯಕ್ತಿಕವಾಗಿ ಮಾತನಾಡಿಕೊಳ್ಳುತ್ತಿದ್ದೆವು ಅಂತ ಜಮೀರ್ ಹೇಳಿದ್ದಾರೆ. ಆದರೆ ಸಾರ್ವಜನಿಕವಾಗಿ ಯಾಕೆ ಇಂತಹ ಹೇಳಿಕೆ ನೀಡಬೇಕು ಎಂದರು. ಚುನಾವಣೆ ಸಂದರ್ಭದಲ್ಲಿ ಟೀಕೆ ಟಿಪ್ಪಣಿ ಸಹಜ. ಟೀಕೆ ಟಿಪ್ಪಣಿ ಮೇಲೆ ಚುನಾವಣೆ ನಿರ್ಧಾರವಾಗಲ್ಲ ಎಂದರು.
Advertisement