ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದ್ದು ಇದೀಗ ಯಾರು ಗೆಲ್ಲಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ. ಆದರೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ.
ಹೌದು... ಕ್ಷೇತ್ರದಲ್ಲಿ ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿ ಫಲಿತಾಂಶ ಬರಬಹುದು. ಆದರೆ ಕಾಂಗ್ರೆಸ್ ಗಿಂತ ಬಿಜೆಪಿ, JDS ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ ಎಂದು ಹೇಳುವ ಮೂಲಕ ಸೋಲಿನ ಸುಳಿವು ಕೊಟ್ಟಿದ್ದಾರೆ. ಅಲ್ಲದೇ ಜಮಿರ್ ಅಹಮ್ಮದ್ ಖಾನ್ ಕರಿಯ ಕುಮಾರಸ್ವಾಮಿ ಹಾಗೂ ಮುಸ್ಲಿಂರೆಲ್ಲಾ ಪೈಸೆ ಪೈಸೆ ಕೂಡಿ ಹಾಕಿ ಹೆಚ್ ಡಿ ದೇವೇಗೌಡ ಅವರ ಕುಟುಂಬವನ್ನೇ ಖರೀದಿ ಮಾಡುತ್ತೇವೆ ಎಂಬ ಹೇಳಿಕೆಗಳು ಸೋಲಿಗೆ ಕಾರಣವಾಗಬಹುದು ಎನ್ನುವ ಅರ್ಥದಲ್ಲಿ ಸಿಪಿವೈ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ನಾನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸಿಎಂ, ಡಿಸಿಎಂ, ಸಚಿವರು, ಡಿ.ಕೆ.ಸುರೇಶ್ಗೆ ಧನ್ಯವಾದ ಹೇಳುತ್ತೇನೆ. ಆದರೆ ತಮ್ಮ ಮೊಮ್ಮಗ ಗೆಲ್ಲಲೇಬೇಕೆಂದು ಮಾಜಿ ಪ್ರಧಾನಿ ದೇವೇಗೌಡರೇ ರಣಕಣದಲ್ಲಿ ಹೋರಾಡಿದ್ದಾರೆ. ಇನ್ನು ಸಚಿವ ಜಮೀರ್ ಮಾತಿನಿಂದ ಕಾಂಗ್ರೆಸ್ ಗೆ ಮುಸ್ಲಿಮರಿಂದ ಸ್ವಲ್ಪ ಮತ ಬಂದರೂ. ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು ಬಂದಿಲ್ಲ ಅನ್ನಿಸುತ್ತೆ ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ ಖಾನ್ ಕುಮಾರಸ್ವಾಮಿ ಬಗ್ಗೆ ಆಡಿದ ಮಾತಿನ ಬಗ್ಗೆ ಸಿಪಿ ಯೋಗೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿಯಲ್ಲಿದ್ದಾಗ ನಾವೇ ಇಲ್ಲಿ ಪಕ್ಷವನ್ನು ಕಟ್ಟಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 15 ಸಾವಿರ ಮತ ಪಡೆದಿತ್ತು. ಬಿಜೆಪಿಯಿಂದ ನಾನು ಸೋತಿದ್ದರೂ 85 ಸಾವಿರ ಮತ ಬಂದಿತ್ತು. ನಾನು ಗೆಲ್ಲಬೇಕೆಂದರೆ ಈ ಚುನಾವಣೆ 1 ಲಕ್ಷ ಮತ ತೆಗೆದುಕೊಳ್ಳಬೇಕು. ಇಲ್ಲಿ ಸಮಬಲದ ಹೋರಾಟ ಇದೆ. ಒಕ್ಕಲಿಗ ಮತ ಕ್ರೋಢೀಕರಣ ಆಗಿದ್ದರೆ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ. ಡಿಕೆ ಸುರೇಶ್, ಡಿಕೆ ಶಿವಕುಮಾರ್, ನಾನು ಒಕ್ಕಲಿಗನಾಗಿದ್ರೂ ನಮ್ಮನ್ನು ಜನರು ಮಾಸ್ ಲೀಡರ್ ಅಂತ ಒಪ್ಪಲ್ಲ. ಆದರೆ ದೇವೇಗೌಡರನ್ನು ಕುಮಾರಸ್ವಾಮಿಯನ್ನು ಒಪ್ಪುತ್ತಾರೆ ಎಂದರು. ಈ ಮೂಲಕ ಪರೋಕ್ಷವಾಗಿ ಸೋಲಿನ ಸುಳಿವು ನೀಡಿದ್ದಾರೆ.
Advertisement