ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿ ರೂ.50 ಕೋಟಿ ಆಮಿಷವೊಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ನ ಸಚಿವರೇ ಪ್ರಯತ್ನ ಮಾಡ್ತಿದ್ದು, ಅವರಿಗೆ ಭಯಪಡಬೇಕಾಗಿದೆ ಎಂದರು.
ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ತಮ್ಮ ಆರೋಪವನ್ನು ಸಾಕ್ಷ್ಯಾಧಾರಗಳೊಂದಿಗೆ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ ಗೆದ್ದು ಬಿಟ್ಟಿದ್ದೇವೆ ಎಂದು ಭ್ರಮೆಯಲ್ಲಿದ್ರು ಆದ್ರೆ, ರಾಜ್ಯದ ಭ್ರಷ್ಟಾಚಾರ ಪರಿಣಾಮ ಹರಿಯಾಣದಲ್ಲಿ ಚುನಾವಣೆ ಸೋತ್ರು. ಮಹಾರಾಷ್ಟ್ರ ಚುನಾವಣೆಯಲ್ಲೂ ಸೋಲುತ್ತಾರೆ. ಬೈ ಎಲೆಕ್ಸನ್ ನಲ್ಲಿ ಸೋಲುತ್ತಿದ್ದೇವೆಂದು ಕಾಂಗ್ರೆಸ್ ಗೆ ಗೊತ್ತಾಗಿದೆ. ಕಾಂಗ್ರೆಸ್ ನ ಘಟಾನುಘಟಿಗಳೇ ಸಾವಿರಾರು ಕೋಟಿ ತಗೊಂಡು ಕಾಂಗ್ರೆಸ್ ಶಾಸಕರನ್ನೇ ಖರೀದಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನ ನಾಲ್ಕರಿಂದ ಆರು ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಯಸುತ್ತಿದ್ದಾರೆ. ಅವರು ಅವರನ್ನು ಹೊರಗಿನವರಂತೆ ನೋಡುತ್ತಾರೆ ಮತ್ತು ಐದು ವರ್ಷಗಳ ಅವಧಿಗೆ ಮುಂಚೆಯೇ ಅವರು ಕೆಳಗಿಳಿಯಬೇಕೆಂದು ಬಯಸುತ್ತಾರೆ. ಅವರು ನಿಮ್ಮನ್ನು ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿಎಂ ಎಂದು ನೋಡುತ್ತಿದ್ದಾರೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡೋದು ನಿಶ್ಚಿತ, ಯಾವತ್ತೂ ರಾಜೀನಾಮೆ ಕೊಡ್ತಾರೆ, ಮುಂದೆ ಯಾರು ಸಿಎಂ ಆಗಿ ಬರ್ತಾರೆಂಬುದು ಪ್ರಶ್ನೆ ಅಷ್ಟೇ, ಬಿಜೆಪಿಯಲ್ಲಿ 66 ಶಾಸಕರು ಅಷ್ಟೇ ಇರೋದು. ಶಾಸಕರ ಖರೀದಿ ಮಾಡುವ ಪ್ರಶ್ನೆ ಬರೋದಿಲ್ಲ ಎಂದ ವಿಜಯೇಂದ್ರ, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನಾವೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದರು.
Advertisement