ಸಚಿವ ಜಮೀರ್ 'HDK ಕರಿಯ' ಹೇಳಿಕೆ ಸರಿಯಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಕಟು ಟೀಕೆ

ಜಮೀರ್ ಏನು ಬೇಕಾದರೂ ಕರೆದುಕೊಳ್ಳಲಿ. ಕರಿಯ ಅಂತಾದರೂ, ಕೊಚ್ಚೆ ಅಂತಾದರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಜಮೀರ್ ವಿರುದ್ಧ ಕ್ರಮದ ಬಗ್ಗೆ ಮುಂದೆ ಯೋಚಿಸುತ್ತೇವೆ ಎಂದರು.
DK Shivakumar-Zameer Ahmed Khan
ಡಿಕೆ-ಶಿವಕುಮಾರ್-ಜಮೀರ್ ಅಹ್ಮದ್ ಖಾನ್
Updated on

ಬೆಂಗಳೂರು: ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ಕರೆದಿರುವುದು ರಾಜ್ಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರೇ ಜಮೀರ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದು ಇದೀಗ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಸಹ ಜಮೀರ್ ಅಹ್ಮದ್ ಅವರ ಕರಿಯಾ ಹೇಳಿಕೆ ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನು ಒಪ್ಪುವುದಿಲ್ಲ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಜಮೀರ್ ಏನು ಬೇಕಾದರೂ ಕರೆದುಕೊಳ್ಳಲಿ. ಕರಿಯ ಅಂತಾದರೂ, ಕೊಚ್ಚೆ ಅಂತಾದರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಜಮೀರ್ ವಿರುದ್ಧ ಕ್ರಮದ ಬಗ್ಗೆ ಮುಂದೆ ಯೋಚಿಸುತ್ತೇವೆ ಎಂದರು.

ಜಮೀರ್ ಖಾನ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಪ್ರತಿಭಟನೆ ನಡೆಸುತ್ತಿವೆ. ಕುಮಾರಸ್ವಾಮಿ ವಿರುದ್ಧ ವರ್ಣ ನಿಂದನೆ ಮಾಡಿರುವ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಒಕ್ಕಲಿಗರ ಸಂಘ ಸಹ ಕುಮಾರಸ್ವಾಮಿ ಪರ ಮಾತನಾಡಿದ್ದು ಜಮೀರ್ ಖಾನ್ ರನ್ನು ಸಂಪುಟದಿಂದ ವಜಾಗೊಳಿಸಬೇಕು. ಅಲ್ಲದೆ ಸಾರ್ವಜನಿಕವಾಗಿ ಕ್ಷಣೆಯಾಚಿಸಬೇಕು ಎಂದು ಆಗ್ರಹಿಸಿತ್ತು.

ತಮ್ಮ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡಿರುವುದನ್ನು ತಿಳಿದ ಜಮೀರ್ ಖಾನ್ ನಾನು ಕುಮಾರಸ್ವಾಮಿಯನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಿದ್ದರು. ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಜಮೀರ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com