ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ ಜಟಾಪಟಿ: ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಮತ್ತೊಂದು ಅಧ್ಯಾಯ; ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ ದೀರ್ಘಾಯುಷ್ಯ!

2019ರಲ್ಲಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆ ನಡೆದ ರಾಜಕೀಯ ಬೆಳವಣಿಗೆಗಳಿಗೆ ಸದ್ಯದ ಪರಿಸ್ಥಿತಿ ಹೋಲಿಕೆಯಾಗುತ್ತಿದೆ.
Siddaramaiah And Dk shivakumar
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ಸರ್ಕಾರ ಬೀಳಿಸುವ ಉದ್ದೇಶದಿಂದ 50 ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರು. ಹಣದ ಆಮಿಷ ಒಡ್ಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ರಾಜ್ಯ ರಾಜಕೀಯದಲ್ಲಿ ಬಾರೀ ಸದ್ದು ಮಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಸಿದ್ದರಾಮಯ್ಯ ಮಾತಿಗೆ ಬೆಂಬಲ ವ್ಯಕ್ತ ಪಡಿಸಿ ಶಾಸಕರಿಗೆ ಆಮಿಷ ಒಡ್ಡಿರುವುದು ನಿಜ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಸ್ತುತ ಸರ್ಕಾರವು ಜನವರಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಹಿರಿಯ ನಾಯಕರಾದ ಎಚ್‌ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಭವಿಷ್ಯವಾಣಿಯ ನಡುವೆ ಸಿದ್ದರಾಮಯ್ಯ ಅವರ ಈ ಹೇಳಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಹೇಳಿಕೆಗಳು ಕೇವಲ ರಾಜಕೀಯ ನಿಲುವುಗಳೇ ಅಥವಾ ಕರ್ನಾಟಕ ಸರ್ಕಾರವನ್ನು ಉರುಳಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ.

2019ರಲ್ಲಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆ ನಡೆದ ರಾಜಕೀಯ ಬೆಳವಣಿಗೆಗಳಿಗೆ ಸದ್ಯದ ಪರಿಸ್ಥಿತಿ ಹೋಲಿಕೆಯಾಗುತ್ತಿದೆ. ಹಿರಿಯ ನಾಯಕರು ಶೀಘ್ರವೇ ಸರ್ಕಾರ ಪತನವಾಗುತ್ತದೆ ಎಂದು ಬಹಿರಂಗವಾಗಿ ಭವಿಷ್ಯ ನುಡಿದಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿಯಂತಹ ಅನುಭವಿಗಳು ಸರ್ಕಾರದ ಆಯುಷ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೇ ಮುಂದೆ ಬಹುದೊಡ್ಡ ಘಟನೆ ಸಂಭವಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಎಚ್ಚರಿಸುತ್ತಾರೆ. ಕೇಂದ್ರ ಸಚಿವ ವಿ ಸೋಮಣ್ಣ ಕೂಡ ರಾಜ್ಯ ಸರ್ಕಾರದ ಭವಿಷ್ಯದ ಅಸ್ಥಿರತೆಯ ಸುಳಿವು ನೀಡಿದ್ದು, ತೆರೆಮರೆಯಲ್ಲಿ ಪವರ್ ಪ್ಲೇ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಸರ್ಕಾರವನ್ನು ಉರುಳಿಸಲು ನಿಜವಾಗಿಯೂ ಸಂಚು ನಡೆಯುತ್ತಿದ್ದರೇ ಭಾರೀ ಪ್ರಮಾಣದ ಹಣ ಮತ್ತು ಪ್ರಭಾವವನ್ನು ಒಳಗೊಂಡಿರುತ್ತದೆ. ಶಾಸಕರನ್ನು ಓಲೈಸಲು, ಶಾಸಕರನ್ನು ರಹಸ್ಯ ಸ್ಥಳಗಳಲ್ಲಿ ಇರಿಸಲು 2,500 ಕೋಟಿ ರೂಪಾಯಿ ಚಲಾವಣೆಯಲ್ಲಿರಬಹುದು ಎಂಬ ಸುದ್ದಿ ಹರಡುತ್ತಿದೆ.

Siddaramaiah And Dk shivakumar
ಕಾಂಗ್ರೆಸ್ ನಾಯಕರು ಸ್ವಾಭಿಮಾನಿಗಳು, BJP 50 ಕೋಟಿ ರೂ ಆಫರ್‌ಗೆ ಎಂದಿಗೂ ಬೀಳಲ್ಲ: ಸವದಿ

ಐದು ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಮೊದಲು ನಡೆದ ಪ್ರಮುಖ ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಹಾಜರಿದ್ದರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಕರ್ನಾಟಕವು ಇದೇ ರೀತಿಯ ಕ್ರಾಂತಿಗೆ ಕಾರಣವಾಗಬಹುದು, ಕೋಟ್ಯಂತರ ರೂಪಾಯಿ ಹಣ ಅದರ ರಾಜಕೀಯ ಸನ್ನಿವೇಶವನ್ನು ಬದಲಾಯಿಸಬಹುದು. “ಬಿಜೆಪಿಗೆ ಏನನ್ನ ಬೇಕಾದರೂ ಮಾಡುವ ಶಕ್ತಿ ಇದೆ. ಅವರು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಏನು ಮಾಡಿದರು ಎಂಬುದನ್ನು ನಾವು ನೋಡಿದ್ದೇವೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, “ನೀವು ನಿಮ್ಮ ಸ್ವಂತ ಶಾಸಕರ ಮೇಲೆ ನಂಬಿಕೆ ಕಳೆದುಕೊಂಡಿದ್ದೀರಿ ಮತ್ತು 50 ಕೋಟಿ ರೂಪಾಯಿ ಲಂಚದ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವಂತೆ ತೋರುತ್ತಿದೆ. ಇಂತಹ ಹೇಳಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನಿಸುತ್ತದೆ ಎಂದಿದ್ದಾರೆ.

ಉರುಳಿದ ಸರ್ಕಾರಗಳ ಇತಿಹಾಸ

ಕಳೆದ ದಶಕದಲ್ಲಿಯೇ ಉತ್ತರಾಖಂಡ, ಅರುಣಾಚಲ ಪ್ರದೇಶ (2016), ಮಣಿಪುರ (2017), ಕರ್ನಾಟಕ, ಗೋವಾ, ಮಹಾರಾಷ್ಟ್ರ (2019), ಮತ್ತು ಮಧ್ಯಪ್ರದೇಶ (2020) ಸರ್ಕಾರಗಳ ಅಧಿಕಾರಾವಧಿಯಲ್ಲಿ ಹಲವು ಏರುಪೇರುಗಳು ಮತ್ತು ಪಲ್ಲಟಗಳನ್ನು ಕಂಡಿವೆ.

‘ಹಣದ ಶಕ್ತಿಯ ಮೂಲಕ ನ್ಯಾಯಸಮ್ಮತವಾಗಿ ಚುನಾಯಿತ ಸರ್ಕಾರಗಳನ್ನು ಕಿತ್ತೊಗೆಯುವುದು ಸಾಮಾನ್ಯವಾಗುತ್ತಿರುವ ಈ ಯುಗದಲ್ಲಿ ನಾಗರಿಕ ಸಮಾಜ ಎಚ್ಚೆತ್ತುಕೊಂಡು ಈ ಬೆಳವಣಿಗೆಗಳಿಗೆ ಪೂರ್ವಭಾವಿಯಾಗಿ ಸ್ಪಂದಿಸುವುದು ಅತ್ಯಗತ್ಯ’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ.ಕಿರಣ ಗಾಜನೂರ ಹೇಳಿದ್ದಾರೆ. ಕರ್ನಾಟಕವು ರಾಜಕೀಯ ಅಸ್ಥಿರತೆಯ ಮತ್ತೊಂದು ಅಧ್ಯಾಯವನ್ನು ಎದುರು ನೋಡುತ್ತಿದೆಯೇ ಮತ್ತು ರಾಜಕೀಯ ಭವಿಷ್ಯವನ್ನು ಬದಲಾಯಿಸುವ ಅಪಾರ ಪ್ರಮಾಣದ ಹಣ ಎಲ್ಲಿಂದ ಹರಿದು ಬರುತ್ತಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com