ಬೆಂಗಳೂರು: ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ 100 ಕೋಟಿ ರೂಪಾಯಿ ಆಫರ್‌ನೊಂದಿಗೆ ತಮ್ಮನ್ನು ಸಂಪರ್ಕಿಸಿದೆ ಎಂದು ತಮ್ಮ ಪಕ್ಷದ ಶಾಸಕ ರವಿ ಗಾಣಿಗ ಅವರು ಮಾಡಿದ ಆರೋಪವನ್ನು ಕಾಂಗ್ರೆಸ್ ಶಾಸಕರು ಸೋಮವಾರ ತಳ್ಳಿಹಾಕಿದ್ದಾರೆ.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಬಿಜೆಪಿಯ ಯಾವೊಬ್ಬ ನಾಯಕರು ತಮ್ಮ ಬಳಿ ಬಂದು ಹಣದ ಆಮಿಷ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಆಫರ್ ಬಂದಿತ್ತು. ನಂತರ ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಸ್ನೇಹಕ್ಕಾಗಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು. ಆದರೆ ಎಂದಿಗೂ ಹಣದ ಆಮಿಷ ಒಡ್ಡಿಲ್ಲ ಎಂದು ಶಾಸಕ ಬಾಳಾಸಾಹೇಬ ಪಾಟೀಲ್ ಹೇಳಿದ್ದಾರೆ.
ಶಾಸಕ ರವಿ ಗಾಣಿಗ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಶಾಸಕ ಪಾಟೀಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಮೊದಲ ದಿನದಿಂದಲೂ ಪ್ರಯತ್ನ ನಡೆಯುತ್ತಿದೆ. 136 ಕಾಂಗ್ರೆಸ್ ಶಾಸಕರು ಮತ್ತು ಒಬ್ಬ ಪಕ್ಷೇತರ ಶಾಸಕರು ನಮ್ಮ ಪಕ್ಷದ ಜೊತೆ ನಿಲ್ಲುತ್ತಾರೆ. ನಾವು ಯಾವುದೇ ವಿಷಯಕ್ಕೂ ಮಣಿಯುವುದಿಲ್ಲ. ನಾನು ಏನೇ ಹೇಳಿದರೂ ಅದಕ್ಕೆ ಅಂಟಿಕೊಳ್ಳುತ್ತೇನೆ. ನನಗೆ ಹಣದ ಆಮಿಷ ತೋರಿಸಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಸಂತೋಷವಾಗಿದ್ದೇವೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಕೂಡ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕ ರವಿ ಗಾಣಿಗ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕ ರವಿ ಗಾಣಿಗ ಅವರಿಂದ ಮಾತ್ರ ಸ್ಪಷ್ಟನೆ ಪಡೆಯಬೇಕು ಎಂದು ತಮ್ಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾವು 136 ಸ್ಥಾನಗಳನ್ನು ಗೆದ್ದಿದ್ದೇವೆ. ಬಿಜೆಪಿಯ ಆಫರ್‌ಗಳ ಬಗ್ಗೆ ಯಾರೂ ಚರ್ಚಿಸಿಲ್ಲ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಾನು ದೊಡ್ಡ ನಾಯಕನಲ್ಲ ಎಂದು ಶಾಸಕ ತಮ್ಮಯ್ಯ ತಿಳಿಸಿದರು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ, ಪಕ್ಷದ ಶಾಸಕರನ್ನು ಖರೀದಿಸುವ ಯತ್ನ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಬಿಜೆಪಿ ಹೆಸರುವಾಸಿ. ಅವರು ‘ಆಪರೇಷನ್ ಕಮಲ’ದಲ್ಲಿ ಪರಿಣಿತರು. ಅವರು ಇದನ್ನು ಹಲವಾರು ರಾಜ್ಯಗಳಲ್ಲಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಅವರು 42 ಶಾಸಕರನ್ನು ತೆಗೆದುಕೊಂಡು ಸರ್ಕಾರ ರಚಿಸಿದರು. ನಮ್ಮ ರಾಜ್ಯದಲ್ಲಿ ಅವರು 17 ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದರು ಎಂದರು.
“ಅವರು ಅದನ್ನು ಗೋವಾ ಮತ್ತು ಮಧ್ಯಪ್ರದೇಶದಲ್ಲಿ ಮಾಡಿದ್ದಾರೆ. ಹಣದ ಪ್ರಮಾಣ ಎಷ್ಟು ಎಂದು ತಿಳಿಯದಿದ್ದರೂ 50 ಕೋಟಿ ರೂ.ಗೆ ಶಾಸಕರ ಖರೀದಿಗೆ ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೇಳಿಕೆ ನೀಡಿದರೆ ಅದಕ್ಕೆ ಅರ್ಥ ಬರುತ್ತದೆ ಮತ್ತು ಅದಕ್ಕೆ ಸಾಕ್ಷಿಯೂ ಇರುತ್ತದೆ ಎಂದು ಪರಮೇಶ್ವರ ಹೇಳಿದರು.
ಈ ವಿಷಯದ ಬಗ್ಗೆ ಎಸ್‌ಐಟಿ ರಚಿಸುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ತನಿಖೆ ತಮಾಷೆಯಲ್ಲ ಮತ್ತು ಸರ್ಕಾರಕ್ಕೆ ಸೂಕ್ತವೆಂದು ಕಂಡುಬಂದಾಗ ತನಿಖೆಯನ್ನು ಪರಿಗಣಿಸುತ್ತದೆ ಎಂದು ಹೇಳಿದರು.
ಮಂಡ್ಯದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಗಾಣಿಗ ಅವರು, ಕರ್ನಾಟಕದಲ್ಲಿ ಸರ್ಕಾರ ರಚಿಸುವ ಹತಾಶೆಯಲ್ಲಿರುವ ಬಿಜೆಪಿ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿದ್ದರು.
Advertisement