ಬೆಂಗಳೂರು: ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ, ನಿಮ್ಮ ಹಿರಿತನದ ಬಗ್ಗೆ ಗೌರವ ಇದ್ದೇ ಇದೆ, ಆದರೆ ನಿಮ್ಮ ಬಾಯಿಂದ ಹೊರಡುವ ನಂಜುಕಾರುವ ದ್ವೇಷದ ಮಾತುಗಳನ್ನು ಒಪ್ಪಲಾರೆವು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಗದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಿಜಯೇಂದ್ರ, ಕೋಟಿ,ಕೋಟಿ ಜನರ ಹೋರಾಟ, ತ್ಯಾಗ- ಬಲಿದಾನದ ಫಲವಾಗಿ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿಕೊಂಡ ಸ್ವಾತಂತ್ರ್ಯವನ್ನು ನೆಹರೂ ಕುಟುಂಬ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಪ್ರಜಾಪ್ರಭುತ್ವದೊಂದಿಗೆ ಚೆಲ್ಲಾಟವಾಡಿ, ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಲು ‘ತುರ್ತು ಪರಿಸ್ಥಿತಿ ಎಂಬ ವಿಷಕಾರಿ ಅಣ್ವಸ್ತ್ರ’ವನ್ನು ದೇಶದ ಮೇಲೆ ಬಳಸಿದ್ದು ನಿಮ್ಮ ಕಾಂಗ್ರೆಸ್ ಎಂಬುದನ್ನು ಇಷ್ಟು ಬೇಗ ನೀವು ಮರೆತಂತಿದೆ ಎಂದು ಕಿಡಿ ಕಾರಿದ್ದಾರೆ.
ನೆಹರು ಕುಟುಂಬದ ನೆರಳಿನಲ್ಲಿ ರಾಜಕಾರಣ ಮಾಡುತ್ತಿರುವ ನೀವು ಅವರನ್ನು ಓಲೈಸುವ ಭರದಲ್ಲಿ ‘ಕೊಲ್ಲುವ’ ಮಾತುಗಳನ್ನಾಡಿರುವುದು ನಿಮ್ಮ ಘನತೆಯನ್ನು ಕುಗ್ಗಿಸಿದೆ. ಕಾಂಗ್ರೆಸ್ ನ ಗುಲಾಮಗಿರಿ ರಾಜಕಾರಣವನ್ನು ಮೂಲೋತ್ಪಾಟನೆ ಮಾಡಿ ದೇಶದಲ್ಲಿ ನೈಜ ಭಾರತೀಯತೆಯ ಪರಿಪೂರ್ಣ ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಶತಮಾನದ ಹೋರಾಟ ನಡೆಸಿದ್ದು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ಪೂರಕವಾದ ರಾಷ್ಟ್ರವನ್ನು ಕಟ್ಟಬೇಕೆಂದು ಸಂಕಲ್ಪಿಸಿ ವಿಶ್ವದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಭಾರತವನ್ನು ತಂದು ನಿಲ್ಲಿಸಿರುವುದು ಭಾರತೀಯ ಜನತಾ ಪಾರ್ಟಿ, ಯಾವ ಪಕ್ಷ ವಿಷದ ಹಾವು? ಎನ್ನುವುದನ್ನು ಈ ದೇಶದ ಜನತೆ ತೀರ್ಮಾನಿಸಿ ಈಗಾಗಲೇ ಕಾಂಗ್ರೆಸ್ ಎಂಬ ಘಟಸರ್ಪದ ಹಲ್ಲುಗಳನ್ನು ಕಿತ್ತೆಸೆದಿದ್ದಾರೆ. ಅದರ ನೆರಳಿನಲ್ಲಿ ನಿಂತು ಮಾತನಾಡುತ್ತಿರುವ ನಿಮ್ಮಿಂದ ಜನರು ದ್ವೇಷ ಹಾಗೂ ವಿಷದ ಮಾತುಗಳನ್ನಲ್ಲದೇ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಸಾರಿ ಹೇಳುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಬಳಿಕ ಇದೀಗ ವಿಜಯನಗರ ಶಾಸಕ ಗವಿಯಪ್ಪ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ, ಬಿಜೆಪಿ ಸರ್ಕಾರದ ಅನುದಾನದಲ್ಲೇ ಕೆಲಸ ಮಾಡುತ್ತಿದ್ದೇವೆ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯನವರ ಸರ್ಕಾರದ ಆರ್ಥಿಕ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ಬಹುತೇಕ ಶಾಸಕರು ಒಳಗೊಳಗೇ ಕುದಿಯುತ್ತಿದ್ದಾರೆ, ಇದು ಯಾವಾಗ ಆಸ್ಪೋಟಗೊಳ್ಳುವುದೋ ಗೊತ್ತಿಲ್ಲ, ಆದರೆ ರಾಜ್ಯದ ಅಭಿವೃದ್ಧಿ ಹಾಗೂ ಜನ ಕಲ್ಯಾಣದ ಕಾರ್ಯಗಳಂತೂ ಮೂಲೆ ಸೇರಿರುವುದು ಜನಸಾಮಾನ್ಯರು ಹಾದಿ ಬೀದಿಯಲ್ಲಿ ನಿಂತು ಹಿಡಿಶಾಪ ಹಾಕುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Advertisement