ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದಿದೆ.
ವೋಟಿಗಾಗಿ ಉಚಿತ, ಚುನಾವಣೆ ಬಳಿಕ ದರ ಏರಿಕೆ ಖಚಿತ !ಸರ್ಕಾರಿ ಆಸ್ಪತ್ರೆ ಸೇವೆಗಳ ದರ ಹೆಚ್ಚಳ ಯಾವ ಮಾದರಿ ? ಸಿಎಂ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ, ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಕೊನೆಯ ಆಶಾಕಿರಣವಾಗಿದ್ದವು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಬಡವರಿಗೆ ದುಬಾರಿಯಾಗುತ್ತಿವೆ. 30 ರು. ಒಳರೋಗಿ ಹಾಸಿಗೆ ಈಗ 50 ರೂಪಾಯಿ ಆಗಿದೆ, 750 ರು. ವಿಶೇಷ ವಾರ್ಡ್ ಈಗ 1000 ರೂಪಾಯಿ ಆಗಿದೆ, ಯಾರ ಅಭಿವೃದ್ಧಿಗಾಗಿ ಈ ದರ ಏರಿಕೆ ? ಎಂದು ಜೆಡಿಎಸ್ ಪ್ರಶ್ನಿಸಿದೆ.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಪಾತಳಕ್ಕೆ ತಳ್ಳಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬಡವರಿಗೆ ಶಾಪವಾಗಿ ಪರಿಣಮಿಸಿದೆ. ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವ ಕಾರಣ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್ ಗಳು ಬಂದ್ ಆಗಿವೆ. ಊಟ ಪೂರೈಸಲು ಗುತ್ತಿಗೆ ಪಡೆದಿರುವ ಕಂಪನಿಗೆ ಬಿಬಿಎಂಪಿ ಹಣ ಪಾವತಿಸಿಲ್ಲ. ಜೊತೆಗೆ ಕ್ಯಾಂಟೀನ್ ಸಿಬ್ಬಂದಿಗೂ 6 ತಿಂಗಳಿಂದ ವೇತನ ನೀಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿವಾಳಿ ಅಂಚಿಗೆ ತಲುಪಿದ್ದು, ಅವೈಜ್ಞಾನಿಕ ಗ್ಯಾರಂಟಿ ಹೊರೆಯಿಂದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಜೆಡಿಎಸ್ ಹೇಳಿದೆ.
Advertisement