ಎಕ್ಸಿಟ್ ಪೋಲ್ ಗಳು ತಲೆಕೆಳಗಾಗುತ್ತವೆ, ತಪ್ಪಿನ ಅರಿವಾಗಿ ಜಮೀರ್ ಕ್ಷಮೆ ಕೇಳಿದ್ದಾರೆ; ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು ಖಚಿತ: DKS

ಪಕ್ಷದ ಅಧ್ಯಕ್ಷನಾಗಿ ನಾನೇ ಅವರಿಗೆ ಬುದ್ಧಿ ಹೇಳಿದ್ದೇನೆ. ನನ್ನ ಹೊರತಾಗಿ ಮತ್ತಿನ್ಯಾರು ಅವರಿಗೆ ಬುದ್ಧಿವಾದ ಹೇಳಬೇಕು? ಜಮೀರ್ ಅವರು ಈಗಾಗಲೇ ಅವರ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ" ಎಂದರು.
DK Shivakumar
ಡಿಸಿಎಂ ಡಿ.ಕೆ ಶಿವಕುಮಾರ್
Updated on

ಮುರುಡೇಶ್ವರ: ನಿಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲಾ ತಲೆಕೆಳಗಾಗುತ್ತವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಮರಳುವ ಮುನ್ನ ಮುರುಡೇಶ್ವರ ಗಾಲ್ಫ್ ಕ್ಲಬ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗುತ್ತಿದೆ, ಮಹಾರಾಷ್ಟ್ರದಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸವಿದೆ. ನನಗೆ ಆ ರಾಜ್ಯದ ಬಗ್ಗೆ ಹೆಚ್ಚು ಚಿತ್ರಣವಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು ಕೂಡ ಪ್ರಚಾರಕ್ಕೆ ಹೋಗಿದ್ದೆ, ಆಗ ಕಾಂಗ್ರೆಸ್ ಪರ ಅಲೆ ಕಂಡಿತು. ಆದರೆ ಮತ ಪೆಟ್ಟಿಗೆಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಜಾರ್ಖಂಡ್ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.

ಎಲ್ಲಾ ಎಕ್ಸಿಟ್ ಪೋಲ್ ಗಳು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸೋಲು ಹಾಗೂ ಜಮೀರ್ ಅವರ ಮೈ ಬಣ್ಣ ಹೇಳಿಕೆ ಪರಿಣಾಮ ಬೀರಿದೆ ಎನ್ನುವ ಬಗ್ಗೆ ಕೇಳಿದಾಗ, "ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 16 ಸಾವಿರ ಮತಗಳು ಮಾತ್ರ ದೊರೆತಿದ್ದವು. ಆದರೆ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸ ನನಗಿದೆ. ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಾಗಡಿಯಲ್ಲಿ ಬಾಲಕೃಷ್ಣ, ಕನಕಪುರದಲ್ಲಿ ನಾನು ಗೆದ್ದಿದ್ದೆವು. ಚನ್ನಪಟ್ಟಣದಲ್ಲಿ ಮಾತ್ರ ಗೆದ್ದಿರಲಿಲ್ಲ. ಈ ಬಾರಿ ಗೆಲುವು ಖಂಡಿತ" ಎಂದರು. ಕುಮಾರಸ್ವಾಮಿ ಅವರ ಮೈ ಬಣ್ಣದ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಅವರ ಹೇಳಿಕೆ ಕುರಿತು ಪಕ್ಷದೊಳಗೆ ಅಸಮಾಧಾನ ಇರುವ ಬಗ್ಗೆ ಕೇಳಿದಾಗ, "ಜಮೀರ್ ಅವರು ಉತ್ತಮ ಕೆಲಸಗಾರ. ಇದು ಪಕ್ಷದ ಆಂತರಿಕ ವಿಚಾರ. ಅವರಿಗೆ ಈ ಬಗ್ಗೆ ಬುದ್ದಿ ಹೇಳಲಾಗಿದೆ. ಅವರು ಆತುರವಾಗಿ ಒಂದಷ್ಟು ಹೇಳಿಕೆ ಕೊಟ್ಟಿದ್ದಾರೆ. ಇದು ತಪ್ಪು ಎಂದು ನಾವು ಹೇಳಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ನಾನೇ ಅವರಿಗೆ ಬುದ್ಧಿ ಹೇಳಿದ್ದೇನೆ. ನನ್ನ ಹೊರತಾಗಿ ಮತ್ತಿನ್ಯಾರು ಅವರಿಗೆ ಬುದ್ಧಿವಾದ ಹೇಳಬೇಕು? ಜಮೀರ್ ಅವರು ಈಗಾಗಲೇ ಅವರ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ" ಎಂದರು.

DK Shivakumar
'ಕಾಲಾ' ಕುಮಾರಸ್ವಾಮಿ ಹೇಳಿಕೆ: ಚನ್ನಪಟ್ಟಣದಲ್ಲಿ ಕಾಂಗ್ರೆಸ್'ಗೆ ಸೋಲಾದರೆ ಜಮೀರ್ ವಿರುದ್ಧ ಶಿಸ್ತು ಕ್ರಮ?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com